ರಾಯಚೂರು ಮಾರ್ಚ್ 03 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾರ್ಚ 3ರಂದು ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತ್ಯುತ್ಸವ ನಡೆಯಿತು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಪರಶುರಾಮ ಅವರು ಉದ್ಘಾಟಿಸಿ ಮಾತನಾಡಿ, ಮಹನೀಯರ ಜಯಂತಿಗಳು ಆಚರಣೆಗಷ್ಟೆ ಸೀಮಿತವಾಗದೇ ಅವರ ಆದರ್ಶ, ತತ್ವಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
17ನೇ ಶತಮಾನದಲ್ಲಿ ಜೀವಿಸಿದ್ದ ಕೈವಾರ ತಾತಯ್ಯ ಅವರು ಪವಾಡ ಪುರುಷರಾಗಿದ್ದರು. ತಾತಯ್ಯ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ಸಮಾಜಗಳು ಸ್ಮರಿಸಿಕೊಳ್ಳಬೇಕಿದೆ. ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ, ತಾರತಮ್ಯ, ಅಸಮಾನತೆ ಹೋಗಲಾಡಿಸಲು ತಾತಯ್ಯರು ಕೈಗೊಂಡ ಸಾಮಾಜಿಕ ಸುಧಾರಣೆ ಕಾರ್ಯ ಇಂದಿಗೂ ಮಾದರಿಯಾಗಿದೆ. ತ್ರಿಕಾಲ ಜ್ಞಾನಿಯಾಗಿದ್ದ ಕೈವಾರ ತಾತಯ್ಯ ಅವರು ಪ್ರಾಪಂಚಿಕ ಆಗು-ಹೋಗುಗಳನ್ನು ಅರಿತು ಮನುಕುಲದ ಒಳಿತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರವು ಅವರ ಜಯಂತಿ ಆಚರಣೆ ಮಾಡುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ದ್ರಾಕ್ಷಿ, ಅನೀಲ್ ಕುಮಾರ್, ವಿನೋದ ಕುಮಾರ್, ಸುರೇಶ, ಶೈಲಜಾ ಸೇರಿದಂತೆ ಇತರರು ಇದ್ದರು.

