ಮುದ್ದೇಬಿಹಾಳ:
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧಿಸಿದಂತೆ ಮಾದಿಗ ಸಂಘಟನೆಗಳ ಒಕ್ಕೂಟ ಮುಖಂಡರು ಶನಿವಾರ ಪತ್ರಿಕಾ ಹೇಳಿಕೆ ನೀಡಿದರು. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ತಿಪ್ಪಣ್ಣ ದೊಡಮನಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೊಂದ ಸಮುದಾಯಗಳ ಧ್ವನಿಯಾಗಬೇಕು ಎಂದು ಒತ್ತಾಯಿಸಿದರು. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರ ನಿಲುವು ಹೊಂದಿರುವ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಸ್ಪಷ್ಟ ಹಾಗೂ ದೃಢ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ವರದಿಯನ್ನು ಸಂಪೂರ್ಣವಾಗಿ ಜಾರಿ ಮಾಡದಿರುವುದು ಸಮುದಾಯಗಳಲ್ಲಿ ನಿರಾಶೆ ಮೂಡಿಸಿದೆ ಎಂದು ದೂರಿದರು.
ಸದಾಶಿವ ಆಯೋಗದ ವರದಿ ಪ್ರಕಾರ 15:15 ಅನುಪಾತದಲ್ಲಿ ಒಳಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಈ ಕುರಿತು ರಾಜ್ಯಪಾಲರ ಅಂಕಿತ ಹಾಗೂ ಅನುಮೋದನೆ ಈಗಾಗಲೇ ಲಭಿಸಿರುವುದರಿಂದ ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಿರುವ ಸಂದರ್ಭದಲ್ಲಿ, ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಸರಿಸದೆ ನೇಮಕಾತಿ ನಡೆಸಿದರೆ ಸಮುದಾಯ ಬೀದಿಗಿಳಿದು ಉಗ್ರ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು.
ಮೀಸಲಾತಿ ವರದಿಯನ್ನು ಸಂಪೂರ್ಣ ಜಾರಿಗೆ ತರದಿರುವುದರಿಂದ ಅವಕಾಶವಂಚಿತ ಸಮುದಾಯಗಳಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತ್ವರಿತ ಕ್ರಮ ಕೈಗೊಂಡಿರುವುದನ್ನು ಉದಾಹರಿಸಿ, ಕರ್ನಾಟಕದಲ್ಲಿ ಮಾತ್ರ ವಿಳಂಬ ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಿದರು.
ನೇರ ನೇಮಕಾತಿ, ಪದೋನ್ನತಿ, ಬ್ಯಾಕ್‌ಲಾಗ್ ಹುದ್ದೆಗಳು ಹಾಗೂ ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲ ವಲಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು. ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು 6:6:5 ಅನುಪಾತದಲ್ಲಿ ಹಂಚಿಕೆ ಮಾಡಬೇಕು. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ, ಪ್ರತ್ಯೇಕ ನಿಗಮ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜೊತೆಗೆ ಶಾಶ್ವತ ಆಯೋಗ ರಚನೆ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಆದಿಜಾಂಬವ ಅಭಿವೃದ್ಧಿ ನಿಗಮ, ಚರ್ಮ ಕೈಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳಿಗೆ ತಲಾ ₹2,000 ಕೋಟಿ ಅನುದಾನ ನೀಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ

