ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಗೋನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಹತ್ತಿರ ಗ್ರಾಮಸ್ಥರು ಎರಡು ದಿನಗಳ ಹಿಂದೆ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಸಮಯದಲ್ಲಿ ಮಣ್ಣಲ್ಲಿ ಹೂತು ಹೋಗಿದ್ದ ಶಾಸನ ಪತ್ತೆಯಾಗಿದೆ.
8 ಅಡಿ ಉದ್ದ, ಎರಡುವರೆ ಅಡಿ ಅಗಲದ ಈ ಕಲ್ಲಿನಲ್ಲಿ ಆರು ಸಾಲುಗಳನ್ನು ಬರೆಯಲಾಗಿದೆ ಹಾಗೂ ಕೆಲವು ಚಿತ್ರಗಳನ್ನು ಬಿಡಿಸಲಾಗಿದೆ. ಈ ಶಾಸನವು 16ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದ್ದು ಎನ್ನಲಾಗಿದೆ. ಶಾಸನದಲ್ಲಿ ತ್ರಿಶೂಲ, ಈಶ್ವರ,ನಂದಿ,ಸೂರ್ಯ ಚಂದ್ರ ಚಿತ್ರಗಳಿವೆ. ಕೆಳಭಾಗದಲ್ಲಿ ಹಂಪಿ ವಿರೂಪಾಕ್ಷ ದೇವರಿಗೆ ಸೇರಿದ ಗುಣಹಾಳು(ಗೋನಾಳು) ಗ್ರಾಮವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಕೆತ್ತಲಾಗಿದೆ. ಕೆಳಗಡೆ ಗೋವಿನ ಚಿತ್ರವನ್ನು ರಚಿಸಿದ್ದು, ಬಹುತೇಕ ಅಳಿಸಿದ್ದು, ಸ್ವಲ್ಪ ಪ್ರಮಾಣದಲ್ಲಿ ಕಾಣಿಸುತ್ತದೆ.
ಈ ಶಾಸನ ಪಠ್ಯ ಈಗಾಗಲೇ ಇನ್ ಸ್ಕ್ರಿಪ್ಟನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಎನ್ನುವ 1997ರ ಮೈಸೂರಿನ ಡೈರೆಕ್ಟೋರೇಟ್ ಆಫ್ ಆರ್ಕಿಯಾಲಜಿ ಆಂಡ್ ಮ್ಯೂಸಿಯಮ್ಸ್ ವ್ಯಾಲ್ಯೂಮನಲ್ಲಿ ದಾಖಲಾಗಿದೆ ಎಂದು ಕೊಪ್ಪಳ ಜಿಲ್ಲೆ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಜೀರಿಗನೂರು ಕೆ.ಆಂಜಿನೇಯ ತಿಳಿಸಿದರು.
ಗೋನಾಳು ಗ್ರಾಮವನ್ನು ಹಂಪಿ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಲಾಗಿದ್ದು,ಆದನ್ನು ಸೂಚಿಸುವ ನಾಮಫಲಕ ರೀತಿಯ ಶಾಸನ ಇದಾಗಿದೆ ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ವಿವರಿಸಿದರು.
ಗ್ರಾಮದಲ್ಲಿ ಪತ್ತೆಯಾಗಿರುವ ಈ ಶಾಸನವನ್ನು ಅಧಿಕಾರಿಗಳು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *