ಮಸ್ಕಿ: ತಾಲೂಕಿನ ಊಮಲೂಟಿ ಗ್ರಾಮದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲವೆಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಯುವ ಘಟಕದ ತಾಲೂಕಾಧ್ಯಕ್ಷ ಮೌನೇಶ ಕಣ್ಣೂರು ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮೋರಾರ್ಜಿ ದೇಸಾಯಿ ವಸತಿ ಶಾಲೆ ಊಮಲೂಟಿಯಲ್ಲಿ ಸುಮಾರು 250 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಆದರೆ ತುರವಿಹಾಳ ಪಟ್ಟಣದ ಮೊರಾರ್ಜಿ ವಸತಿ ಶಾಲೆಯ ಮಕ್ಕಳ್ಳನ್ನು ಊಮಲೂಟಿ ವಸತಿ ಶಾಲೆಯಲ್ಲಿ ಸೇರಿಸಿದ್ದರಿಂದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಾಗಿರುವುದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ವಸತಿ, ಆಹಾರ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ದಾಖಲಾತಿ ಮೀರಿ ವಿದ್ಯಾರ್ಥಿಗಳಿರುವದರಿಂದ ಸಮಸ್ಯೆಗಳು ಉಂಟಾಗಿದೆ.
ಇದಲ್ಲದೇ ವಸತಿ ಶಾಲೆಯಲ್ಲಿರುವ ಮಕ್ಕಳನ್ನು ಪಾಲಕರು ಭೇಟಿಯಾಗಲು ತೆರಳಿದರೆ ಪ್ರಾಂಶುಪಾಲ ಗುರುಪಾದಪ್ಪಗೌಡ ಅಗೌರವದಿಂದ ವರ್ತಿಸುವುದರ ಜತೆಗೆ ಪಾಲಕರ ಪೋನ್ ಕರೆಗಳನ್ನು ಸ್ವೀಕರಿಸುವುದಿಲ್ಲವೆಂದು ಆರೋಪಿಸಿದರು.
ಆದ್ದರಿಂದ ಸಂಬಂಧಿಸಿದ ಇಲಾಖೆ ಮೇಲಾಧಿಕಾರಿಗಳು ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಬೇಕು. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಸಂಬAಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಶಾಸಕರು ತಕ್ಷಣ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಈರಣ್ಣ ನಾಯಕ, ದೊಡ್ಡ ಜಕ್ಕಪ್ಪ, ಬಸವರಾಜ ಹಾಲಾಪೂರ, ಪಂಪಾಪತಿ ಇದ್ದರು.

Leave a Reply

Your email address will not be published. Required fields are marked *