ರಾಜ್ಯ ರಾಜಕೀಯದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್‌) ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೆಎಂಎಫ್ ಅಧ್ಯಕ್ಷರು ಯಾರಾಗಬೇಕು? ಎಂಬ ಕುರಿತು ಇನ್ನೂ ಸಹ ಒಮ್ಮತ ಮೂಡಿಲ್ಲ. ಆದ ಕಾರಣ ಮಾರ್ಚ್ 6ರಂದು ನಿಗದಿಯಾಗಿದ್ದ ಚುನಾವಣೆ ಮುಂದೂಡಿಕೆಯಾಗಲಿದೆ.
ಕೆಎಂಎಫ್ ಅಧ್ಯಕ್ಷರ ಆಯ್ಕೆಗೆ ಮಾರ್ಚ್ 6ರ ಶುಕ್ರವಾರ ಚುನಾವಣೆ ನಡೆಯಬೇಕಿತ್ತು. ಆದರೆ ಅಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2026 ಮಂಡನೆ ಮಾಡಲಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಕೆಎಂಎಫ್ ನಿರ್ದೇಶಕರೂ ಆಗಿರುವ ಹಲವು ಶಾಸಕರು ಪಾಲ್ಗೊಳ್ಳಬೇಕಿದೆ. ಆದ್ದರಿಂದ ಮಾರ್ಚ್ 6ಕ್ಕೆ ನಿಗದಿಯಾಗಿದ್ದ ಚುನಾವಣೆ ಮುಂದಕ್ಕೆ ಹೋಗಲಿದೆ. ಅಲ್ಲದೇ ಅಧ್ಯಕ್ಷ ಹುದ್ದೆ ಯಾರಿಗೆ? ಎಂಬ ಕುರಿತು ಇನ್ನೂ ಸಹ ಒಮ್ಮತ ಮೂಡಿಲ್ಲ.

ಆಕಾಂಕ್ಷಿಗಳು ಯಾರು?; ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಬಮೂಲ್ ಅಧ್ಯಕ್ಷ, ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷ ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮತ್ತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಪ್ರಬಲ ಆಕಾಂಕ್ಷಿಗಳು.

ಕೆಎಂಎಫ್ ಅಧ್ಯಕ್ಷ ಹುದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಾಯಕರಿಗೋ?, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರನಿಗೋ? ಎಂಬುದು ಇನ್ನೂ ಅಂತಿಮವಾಗಿಲ್ಲ. ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷರಾಗಬೇಕು ಎಂದು ಬಯಸಿದ್ದಾರೆ.

ಮಾರ್ಚ್‌ 6ರಂದು ಕೆಎಂಎಫ್ ಅಧ್ಯಕ್ಷ ಚುನಾವಣೆ ನಡೆಸಬಹುದು ಎಂದು ಸಹಕಾರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೆಎಂಎಫ್‌ನ 5 ನಿರ್ದೇಶಕರು ಶಾಸಕರಾದ ಕಾರಣ ಅವರು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾದ ಕಾರಣ ಅಂದು ಚುನಾವಣೆ ನಡೆಸುವುದಿಲ್ಲ.

ಹೆಚ್.ಡಿ.ರೇವಣ್ಣ (ಹಾಸನ ಒಕ್ಕೂಟ), ಬಾಲಚಂದ್ರ ಜಾರಕಿಹೊಳಿ (ಬೆಳಗಾವಿ ಒಕ್ಕೂಟ), ಕೆ.ವೈ.ನಂಜೇಗೌಡ (ಕೋಲಾರ ಒಕ್ಕೂಟ), ರಾಘವೇಂದ್ರ ಹಿಟ್ನಾಳ ( ಬಳ್ಳಾರಿ, ರಾಯಚೂರು, ಕೊಪ್ಪಳ ಒಕ್ಕೂಟ), ಎಚ್.ವಿ.ವೆಂಕಟೇಶ್ (ತುಮಕೂರು ಒಕ್ಕೂಟ)ದ ಕೆಎಂಎಫ್ ನಿರ್ದೇಶಕರು. ಇವರೆಲ್ಲರೂ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾದ ಕಾರಣ ಚುನಾವಣೆ ಮುಂದೂಡಿಕೆಯಾಗಲಿದೆ.

ಕೆಎಂಎಫ್ ಈ ಹಿಂದಿನ ಆಡಳಿತ ಮಂಡಳಿ ಅವಧಿ 2024ರ ಜುಲೈ 7ಕ್ಕೆ ಮುಕ್ತಾಯಗೊಂಡಿದೆ. ಆಗ 2024ರ ಲೋಕಸಭೆ ಚುನಾವಣೆ ಎದುರಾದ ಕಾರಣ ಆಡಳಿತಾಧಿಕಾರಿ ನೇಮಕ ಮಾಡದೇ ಹಳೇ ಮಂಡಳಿಯನ್ನು ಮುಂದುವರೆಸಲಾಗಿತ್ತು.

2025ರ ಜೂನ್‌ 4ರಂದು ಟಿ.ಎಚ್.ಎಂ.ಕುಮಾರ್ ಅವರನ್ನು ಕೆಎಂಎಫ್ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಅಧ್ಯಕ್ಷರ ಆಯ್ಕೆಗೆ ಇನ್ನೂ ಸಹ ಕಾಲ ಕೂಡಿ ಬಂದಿಲ್ಲ.

Leave a Reply

Your email address will not be published. Required fields are marked *