ಹವ್ಯಕ ಭಾಷಾ ಅಕಾಡೆಮಿ ಘೋಷಣೆಗೆ ಸ್ವಾಗತಿಸಿದ ರಾಮಚಂದ್ರಾಪುರ ಮಠ
ಮಂಗಳೂರು: ಹವಿಗನ್ನಡದ ಸಂವರ್ಧನೆ ಹಾಗೂ ಸಂರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿರುವ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ನಿರ್ಧಾರವನ್ನು ರಾಮಚಂದ್ರಾಪುರ ಮಠ ಹರ್ಷದಿಂದ ಸ್ವಾಗತಿಸಿದೆ. ಈ ಮಹತ್ವದ ನಿರ್ಧಾರ ಕೈಗೊಂಡಿರುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಠದ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.
ಮಾತೃಭಾಷೆಯ ಉಳಿವು, ಬೆಳವಣಿಗೆ ಹಾಗೂ ಅದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯತೆಯನ್ನು ಮನಗಂಡು ಕಳೆದ ವರ್ಷ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಚಾತುರ್ಮಾಸ್ಯವನ್ನು ‘ಸ್ವಾಭಾಷಾ ಚಾತುರ್ಮಾಸ್ಯ’ವಾಗಿ ಆಚರಿಸಿದ್ದರು. ಈ ಅವಧಿಯಲ್ಲಿ ಕನ್ನಡ ಹಾಗೂ ಅದರ ವಿವಿಧ ಉಪಭಾಷೆಗಳ ಮಹತ್ವವನ್ನು ವಿವರಿಸುವ ಮೂಲಕ ನಾಡಿನಾದ್ಯಂತ ಭಾಷಾ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದರು.
ಕನ್ನಡದ ಸಮೃದ್ಧ ಪರಂಪರೆಯ ಭಾಗವಾಗಿರುವ ಹವಿಗನ್ನಡವು ವಿಶಿಷ್ಟ ಉಚ್ಚಾರಣೆ, ಪದಸಂಪತ್ತು ಹಾಗೂ ಸಂಸ್ಕೃತಿಯ ಛಾಪು ಹೊಂದಿರುವ ಪ್ರಮುಖ ಉಪಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರವೇ ಮುಂದಾಗಿ ಅಕಾಡೆಮಿ ಸ್ಥಾಪನೆಗೆ ನಿರ್ಧಾರ ಕೈಗೊಂಡಿರುವುದು ಅತ್ಯಂತ ಶ್ಲಾಘನೀಯ ಹೆಜ್ಜೆಯಾಗಿದೆ ಎಂದು ಮಠ ಅಭಿಪ್ರಾಯಪಟ್ಟಿದೆ.
ಅಕಾಡೆಮಿ ಸ್ಥಾಪನೆಯಿಂದ ಹವಿಗನ್ನಡದ ಅಧ್ಯಯನ, ಸಂಶೋಧನೆ, ಸಾಹಿತ್ಯ ರಚನೆ ಹಾಗೂ ಭಾಷಾ ಸಂಸ್ಕೃತಿಯ ದಾಖಲಾತಿ ಕಾರ್ಯಗಳಿಗೆ ಉತ್ತೇಜನ ದೊರೆಯಲಿದೆ. ಭಾಷೆಗೆ ಸಂಬಂಧಿಸಿದ ಪುಸ್ತಕಗಳು, ನಿಘಂಟುಗಳು, ಸಂಶೋಧನಾ ಕೃತಿಗಳು ಪ್ರಕಟವಾಗುವ ಮೂಲಕ ಭಾಷೆಯ ಪರಂಪರೆ ಮತ್ತಷ್ಟು ಸಮೃದ್ಧವಾಗಲಿದೆ.
ಇದೇ ವೇಳೆ ಯುವಪೀಳಿಗೆಗೆ ಹವಿಗನ್ನಡದ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ವಿವಿಧ ಕಾರ್ಯಾಗಾರಗಳು, ಸಾಹಿತ್ಯ ಸಮ್ಮೇಳನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಾಷಾ ತರಬೇತಿ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಮಠ ಅಭಿಪ್ರಾಯಪಟ್ಟಿದೆ.
ಹವ್ಯಕ ಸಮುದಾಯದ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯುವ ಮಹತ್ವದ ಕಾರ್ಯದಲ್ಲಿ ಈ ಅಕಾಡೆಮಿ ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರದ ಈ ನಿರ್ಧಾರ ಹವಿಗನ್ನಡದ ಉಳಿವು ಮತ್ತು ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸವನ್ನು ರಾಮಚಂದ್ರಾಪುರ ಮಠ ವ್ಯಕ್ತಪಡಿಸಿದೆ.

