ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಯುವಕರ ಸಾಧನೆ: ರಾಜ್ಯದ ಹಲವರಿಗೆ ರ‍್ಯಾಂಕ್ – ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಯಾದಗಿರಿ ಜಿಲ್ಲೆಯಿಂದ ಯುಪಿಎಸ್‌ಸಿ ಸಾಧನೆ
ಬೆಂಗಳೂರು/ನವದೆಹಲಿ: ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕರ್ನಾಟಕದ ಹಲವು ಯುವಕರು ಗಮನಾರ್ಹ ಸಾಧನೆ ಮಾಡಿದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ಯಾದಗಿರಿ ಜಿಲ್ಲೆ ಯಿಂದ ಈ ಬಾರಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಕಂಡುಬಂದಿದೆ. ಸೀಮಿತ ಸೌಲಭ್ಯಗಳು ಹಾಗೂ ಗ್ರಾಮೀಣ ಹಿನ್ನೆಲೆಯ ನಡುವೆಯೂ ಜಿಲ್ಲೆಯ ಯುವಕರು ಪರಿಶ್ರಮದಿಂದ Union Public Service Commission (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ..ಮೈಸೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳ ಅಭ್ಯರ್ಥಿಗಳು ಉತ್ತಮ ರ‍್ಯಾಂಕ್ ಪಡೆದು ಆಡಳಿತ ಸೇವೆಗೆ ಆಯ್ಕೆಯಾಗಿದ್ದಾರೆ
ಸಂದೀಪ ಬಾಡದ
ಯಾದಗಿರಿ ನಗರದ ಗಾಂಧಿ ವೃತ್ತದ ನಿವಾಸಿ. ಕಿರಾಣಿ ಅಂಗಡಿ ನಡೆಸುತ್ತಿದ್ದ ಬಸವರಾಜಪ್ಪ ಬಾಡದ ಹಾಗೂ ಗೃಹಿಣಿ ನಿರ್ಮಲಾ ಬಸವರಾಜಪ್ಪ ಪುತ್ರ ಸಂದೀಪ ಬಾಡದ ಅವರಿಗೆ 82ನೇ ರ‍್ಯಾಂಕ್ ಪಡೆದಿದ್ದಾರೆ. ಪ್ರಾಥಮಿಕ ಹಂತದಿಂದ ಪಿಯುವರೆಗೆ ಶಹಾಪುರದ ಜವಾಹರ ನವೋದಯ ವಿದ್ಯಾಲಯದಲ್ಲಿ ಓದಿದರು. ಬೆಂಗಳೂರಿನ ಡಾ.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಡಾ.ಎಐಟಿ) ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ. ಯುಪಿಎಸ್‌ಸಿಯಲ್ಲಿ ಮಾನವಶಾಸ್ತ್ರ ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ಎಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಇರುವಾಗ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸಿದೆ. ಪದವಿ ಮುಗಿಸಿ ಮೂರು ವರ್ಷ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದೆ. ಕಂಪನಿಗೆ ರಾಜೀನಾಮೆ ಕೊಟ್ಟು ದೆಹಲಿಯಲ್ಲಿ ತರಬೇತಿ ಪಡೆದು ಯುಪಿಎಸ್‌ಸಿ ಪಾಸ್ ಮಾಡಿದೆ. ತವರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಕನಸಿದೆ ಎಂದು ಸಂದೀಪ ಹೇಳಿದರು.
ಬಸವರಾಜ ಜವಳಿ
ಯಾದಗಿರಿ ಜಿಲ್ಲೆಯ ಶಹಾಪುರ ನಗರ ಗುತ್ತಿಪೇಟ ನಿವಾಸಿ ಬಸವರಾಜ ಜವಳಿ 664ನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಸ್ಟೋರ್ ವ್ಯಾಪಾರ ಮಾಡುತ್ತಿರುವ ವಿಶ್ವನಾಥ ಹಾಗೂ ಗೃಹಿಣಿ ಗಿರಿಜಾ ಅವರ ಪುತ್ರ. ಯಾದಗಿರಿ ಆರ್.ವಿ ಶಾಲೆಯಲ್ಲಿ ಪೌಢಶಿಕ್ಷಣ, ಕಲಬುರಗಿ ಮಹೇಶ ವಿಜ್ಞಾನ ಕಾಲೇಜಿನಲ್ಲಿ ಪಿಯು ಹಾಗೂ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿದರು. ಯುಪಿಎಸ್‌ಸಿಯಲ್ಲಿ ಮಾನವ ಶಾಸ್ತ್ರ ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ಪ್ರಭಾವಿಯೊಬ್ಬರು ಒತ್ತುವರಿ ಮಾಡಿದ್ದನ್ನು ಶಹಾಪುರ ಪುರಸಭೆಯ ಮಹಿಳಾ ಮುಖ್ಯಾಧಿಕಾರಿಯೊಬ್ಬರು ತೆರವುಗೊಳಿಸಿದರು. ಆಡಳಿತ ಶಕ್ತಿಯು ನನಗೆ ಪ್ರೇರಣೆ ನೀಡಿ, ನಾಗರಿಕ ಸೇವೆ ಎಂದರೆ ಏನು ಎಂಬುದನ್ನು ಅರ್ಥೈಸಿತು. ಅಧಿಕಾರಿಯಾದರೆ ಯಾರಿಗೂ ಹೆದರದೆ ಕೆಲಸ ಮಾಡ ಬಹುದು ಅನಿಸಿತು. ಮೂರು ಹುದ್ದೆ ತೊರೆದು ಮೂರು ವರ್ಷಗಳಿಂದ ಸತತವಾಗಿ ಅಭ್ಯಾಸ ಮಾಡಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಚಂದ್ರಶೇಖರ ದೊರೆ
880ನೇ ರ‍್ಯಾಂಕ್ ಪಡೆದಿರುವ ಚಂದ್ರಶೇಖರ ದೊರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚೆನ್ನೂರ (ಕೆ) ಗ್ರಾಮದ ನಿವಾಸಿ. ಬಿ.ಇ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ ಪದವೀಧರ. ಕೃಷಿಕ, ದಿವಂಗತ ಮಾನಶಪ್ಪ ದೊರೆ ಹಾಗೂ ಗೃಹಿಣಿ ರತ್ಮಮ್ಮ ಅವರ ಪುತ್ರ. ವನದುರ್ಗದ ಸರ್ಕಾರಿ ಪ್ರೌಢಶಾಲೆ, ಕಲಬುರಗಿ ಶ್ರೀಗುರು ಪಿಯು ವಿಜ್ಞಾನ ಕಾಲೇಜು, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ ಪದವಿ ಮುಗಿಸಿದರು. ಯುಪಿಎಸ್‌ಸಿಯಲ್ಲಿ ಮಾನವಶಾಸ್ತ್ರ ಐಚ್ಛಿಕ ವಿಷಯವಾಗಿತ್ತು. ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕೋಚಿಂಗ್ ನೀಡುತ್ತಿದ್ದೆ. ನಮ್ಮ ಅಣ್ಣ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ ಸಂದರ್ಶನ ನೀಡಿದ್ದರೂ ಉತ್ತೀರ್ಣನಾಗಿರಲಿಲ್ಲ. ಅಣ್ಣನ ಕಾಳಜಿ ಹಾಗೂ ಒತ್ತಡದಿಂದ ಪ್ರೇರಣೆ ಪಡೆದು ಅಭ್ಯಾಸ ಮಾಡಿ ಕೊನೆಗೂ ಯುಪಿಎಸ್‌ಸಿಯಲ್ಲಿ ಯಶಸ್ವಿಯಾದೆ. ಎಂದು ಚಂದ್ರಶೇಖರ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಡಾ. ನಿವೇದಿತಾ
ವೈದ್ಯಕೀಯ ವೃತ್ತಿ ನಡುವೆ ಸಾಧನೆಗೈದ ಡಾ. ನಿವೇದಿತಾ (469ನೇ ಯಾರ್ಂಕ್) ಯಾದಗಿರಿ ನಗರದ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಚಂದಪ್ಪ ಬಾವಿಮನಿ ಹಾಗೂ ಪಿಡಿಒ ವಿಜಯಲಕ್ಷ್ಮಿ ಬಾವಿಮನಿ ದಂಪತಿ ಪುತ್ರಿ 3. ನಿವೇದಿತಾ ಅವರು ಎರಡನೇ ಪ್ರಯತ್ನದಲ್ಲೇ 469ನೇ ಯಾರ್ಂಕ್ ಪಡೆದಿದ್ದಾರೆ. ಎಂಬಿಬಿಎಸ್ ಪದವೀಧರೆಯಾಗಿರುವ ಇವರು ದೋಕಾ ಜೈನ್ ಹಾಗೂ ಆರ್‌ವಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದರು. ಆಡಳಿತ ಸೇವೆಯ ಮೂಲಕ ಸಮಾಜ ಸೇವೆ ಮಾಡುವ ಉದ್ದೇಶ ಇವರದ್ದಾಗಿದೆ.
ಕೆ.ಎಲ್. ಸೂರಜ್
ಮೈಸೂರಿನ ಸಿದ್ಧಾರ್ಥನಗರದ ಕೆ.ಎಲ್. ಸೂರಜ್ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 525ನೇ ರ‍್ಯಾಂಕ್ ಪಡೆದಿದ್ದಾರೆ. ಇದು ಅವರ ನಾಲ್ಕನೇ ಪ್ರಯತ್ನದ ಯಶಸ್ಸು. 3ನೇ ಪ್ರಯತ್ನದಲ್ಲಿ 713ನೇ ರ‍್ಯಾಂಕ್ ಗಳಿಸಿ, ಕರ್ನಾಟಕ ಕೇಡರ್‌ನಲ್ಲೇ ಐಪಿಎಸ್ ಆಗಿ ಆಯ್ಕೆಯಾಗಿದ್ದರು.
ರೈತ ಜಿ.ಕೆ.
ಸೋಮಶೇಖರ್–ತೀರ್ಥಾವತಿ ದಂಪತಿಯ ಪುತ್ರರಾದ ಅವರು ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ನವೋದಯ ಶಾಲೆಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬಿ.ಟೆಕ್ ಪದವಿ ಮುಗಿಸಿ ಕ್ಯಾಂಪಸ್ ಆಯ್ಕೆ ಆಗಿದ್ದರೂ, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವ ಸಲುವಾಗಿ ಕೆಲಸಕ್ಕೆ ಹೋಗಿರಲಿಲ್ಲ. ‘ಕೋಚಿಂಗ್ ಸೆಂಟರ್‌ನಿಂದ ತರಬೇತಿ ಪಡೆಯದೇ, ಬಾಡಿಗೆಗೆ ರೂಂ ಮಾಡಿಕೊಂಡು ಗ್ರಂಥಾಲಯದ ಪುಸ್ತಕಗಳನ್ನು ಓದಿ ರ‍್ಯಾಂಕ್ ಪಡೆದಿದ್ದಾನೆ’
ಅನಿರುದ್ಧ ಕಟ್ಟಿಮನಿ
ಬಳ್ಳಾರಿಯ ಅನಿರುದ್ಧ ಕಟ್ಟಿಮನಿ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 786ನೇ ರ‍್ಯಾಂಕ್ ಗಳಿಸಿದ್ದಾರೆ. ತಂದೆ ಪುರುಷೋತ್ತಮ್ ಜೆಸ್ಕಾಂನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್. ತಾಯಿ ನಾಗಮಣಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಬಳ್ಳಾರಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾದ ಅನಿರುದ್ಧ ಐಐಟಿ ಮದ್ರಾಸ್‌ನಿಂದ ಭೌತಶಾಸ್ತ್ರದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2023ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಐಎಫ್‌ಎಸ್ ಪಾಸು ಮಾಡಿದರು. ಸದ್ಯ ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಪ್ರತಿಷ್ಠಾನದಲ್ಲಿ ತರಬೇತಿ ಯಲ್ಲಿದ್ದಾರೆ. ತಮ್ಮ ಮೂರನೇ ಪ್ರಯತ್ನದಲ್ಲಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ‘ಐಎಎಸ್ ಅಧಿಕಾರಿ ಆಗಬೇಕು ಎಂಬ ಉದ್ದೇಶದಿಂದಲೇ ನಾನು ಸಿವಿಲ್ಸ್ ಪರೀಕ್ಷೆ ಬರೆದಿದ್ದೆ. ಇನ್ನೂ ಉನ್ನತ ರ್‍ಯಾಂಕ್ ಪಡೆಯುವ ಉದ್ದೇಶವಿತ್ತು ಎಂದರು.
ಎ.ಮಧು
ಕೋಲಾರ ತಾಲ್ಲೂಕು ಇರಗಸಂದ್ರದ ನಿವಾಸಿ ಎ.ಮಧು ಅವರು 436ನೇ ರ‍್ಯಾಂಕ್ ಪಡೆದ್ದಾರೆ. ಕಳೆದ ಬಾರಿ 544ನೇ ರ‍್ಯಾಂಕ್ ಪಡೆದಿದ್ದ ಮಧು ಈ ಬಾರಿ ಮತ್ತೆ ಪರೀಕ್ಷೆ ಬರೆದು ಫಲಿತಾಂಶ ಸುಧಾರಿಸಿಕೊಂಡಿದ್ದಾರೆ. ಆರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಪೋಷಕರಾದ ಆನಂದ್ ಗೌಡ ಹಾಗೂ ಸುಶೀಲಮ್ಮ ಕೃಷಿಕರು. ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಲೇಜು ಮುಗಿಸಿ ನಂತರ ಬೆಂಗಳೂರಿನ ಜಿಕೆವಿಕೆಯಲ್ಲಿ ಬಿ.ಎಸ್ಸಿ (ಕೃಷಿ) ಓದಿದ್ದಾರೆ
ಆರ್.ಧನಂಜಯ
ನಾಗಮಂಗಲ ತಾಲ್ಲೂಕಿನ ಆರ್.ಧನಂಜಯ ಯುಪಿಎಸ್ಸಿ ಪರೀಕ್ಷೆಯಲ್ಲಿ 554ನೇ ರ‍್ಯಾಂಕ್ ಪಡೆದಿದ್ದಾರೆ.ಇವರು ಕರಡಹಳ್ಳಿಯ ರೈತ ರಾಮಚಂದ್ರ–ಮಂಗಳಮ್ಮ ದಂಪತಿಯ ಮಗ. ಕರಡಹಳ್ಳಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ, ಬಳಿಕ ಮೈಸೂರಿನ ನೌಕಿಸ್ ಪಿಯು ಅಕಾಡೆಮಿ ಯಲ್ಲಿ ಪಿಯುಸಿ, ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ‘ಏಳು ವರ್ಷಗಳಲ್ಲಿ 3 ಬಾರಿ ಸಂದರ್ಶನ ಎದುರಿಸಿದ್ದರೂ ಆಯ್ಕೆಯಾಗಿರಲಿಲ್ಲ. ಇದು ಕೊನೆಯ ಅವಕಾಶ ಎಂದು ಭಾವಿಸಿದ್ದೆ. ಆಯ್ಕೆಯಾಗಿದ್ದೇನೆ. ಭಾಷೆಯ ಬಗ್ಗೆ ಭಯ ಬೇಡ. ಸಂದರ್ಶನ ಎದುರಿಸುವಾಗ ಇಂಗ್ಲಿಷ್, ಹಿಂದಿ ಕಷ್ಟವಾಗುತ್ತದೆಂಬುದು ಸುಳ್ಳು’ ಎಂದು ತಿಳಿಸಿದರು. ‘ದಿನಕ್ಕೆ 10-12 ಗಂಟೆ ಸತತ ಅಭ್ಯಾಸ ಮಾಡುತ್ತಿದ್ದೆ. ಹಿರಿಯರ ಮಾರ್ಗದರ್ಶನ, ಯೂಟ್ಯೂಬ್ ವಿಡಿಯೊಗಳು ಸಹಕಾರಿಯಾದವು’. ತಂದೆ ಹಸು ಸಾಕಿ ಓದಿಗೆ ಬೆಂಗಾವಲಾದರು. ತಮ್ಮ ಎಂ.ಕಾಂ ಮುಗಿಸಿ ನೆರವಾದ. ಡಿ.ಕೆ ರವಿ ಅವರೇ ಸ್ಫೂರ್ತಿ’ ಎಂದರು.
ಕೃಪಾ ಜೈನ್
ಹುಬ್ಬಳ್ಳಿಯ ಕೃಪಾ ಜೈನ್ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 190ನೇ ರ‍್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಇವರು 440ನೇ ರ‍್ಯಾಂಕ್ (ಐಆರ್‌ಎಂಎಸ್) ಹಾಗೂ ಐಎಫ್ಎಸ್ ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಗಳಿಸಿದ್ದರು. ಉನ್ನತ ರ‍್ಯಾಂಕ್ ಗಳಿಸುವ ಮಹತ್ವಾಕಾಂಕ್ಷೆಯಿಂದ ಮತ್ತೊಮ್ಮೆ ಪರೀಕ್ಷೆ ಬರೆದಿದ್ದರು.ಇದೀಗ ಐದನೇ ಪ್ರಯತ್ನದಲ್ಲಿ ಐಪಿಎಸ್ ಆಗಿ ಆಯ್ಕೆಯಾಗಿದ್ದಾರೆ. ಸದ್ಯ ಡೆಹ್ರಾಡೂನ್‌ನಲ್ಲಿ ಐಎಫ್ಎಸ್ ತರಬೇತಿ ಪಡೆಯುತ್ತಿದ್ದಾರೆ. ಇಂದಿರಾ ಮತ್ತು ಉದ್ಯಮಿ ಅಭಯ್ ಪಾರ್ಲೆಚಾ ದಂಪತಿ ಪುತ್ರಿ ಕೃಪಾ, ದ್ವಿತೀಯ ಪಿಯುವರೆಗೆ ಹುಬ್ಬಳ್ಳಿಯಲ್ಲೇ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ. ಪದವಿ ಪೂರೈಸಿದ್ದಾರೆ. ಬಿ.ಇ. ಓದುವಾಗ ನಾಗರಿಕ ಸೇವೆ ಕಡೆಗೆ ಆಸಕ್ತಿ ಬೆಳೆಸಿಕೊಂಡ ಅವರು, ದೆಹಲಿಗೆ ತೆರಳಿ ತಜ್ಞರ ಸಲಹೆ ಪಡೆದು ಅಧ್ಯಯನ ಮಾಡಿದ್ದಾರೆ.
ಎಂ.ಎಸ್.ಉಲ್ಲಾಸ್
ಕೋಲಾರ ತಾಲ್ಲುಕಿನ ಮೇಡಿತಂಬಹಳ್ಳಿ ನಿವಾಸಿ ಎಂ.ಎಸ್.ಉಲ್ಲಾಸ್ ಅವರು 556ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ. ಪಿಎಲ್‍ಡಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎಂ.ಎಚ್.ಶ್ರೀನಿವಾಸ್ ಮತ್ತು ವಿಟ್ಟಪ್ಪನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಸುಜಾತಾ ದಂಪತಿ ಪುತ್ರ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನಗರದ ಚಿನ್ಮಯ ವಿದ್ಯಾಲಯದಲ್ಲಿ ಮಾಡಿದ್ದಾರೆ. ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮತ್ತು ಸುರತ್ಕಲ್‍ನ ಎನ್‍ಐಟಿಕೆಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ವೈ. ಚಂದನ್
ಬೆಂಗಳೂರು: ಸಿಂಗನಾಯಕನಹಳ್ಳಿ ನಿವಾಸಿ, ವಿ.ಯಲ್ಲಪ್ಪ ಮತ್ತು ಮಂಜುಳಾ ಅವರ ಪುತ್ರ. ಬೆಂಗಳೂರಿನ ಆರ್.ಟಿ.ಎನ್.ಇ.ಟಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಎಕ್ಸ್‌ಲೆಂಟ್ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ. ಯುಪಿಎಸ್‌ಸಿಯಲ್ಲಿ ಕೃಷಿ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 661ನೇ ರ‍್ಯಾಂಕ್ ಪಡೆದಿದ್ದು, ಯಾವುದೇ ಕೋಚಿಂಗ್ ತರಗತಿಗೆ ಹೋಗಲಿಲ್ಲ ಎಂದು ತಿಳಿಸಿದರು.
ವರುಣ್‌ಗೌಡ ಪಿ
ಕೋಲಾರ ತಾಲ್ಲೂಕಿನ ತ್ಯಾವನಹಳ್ಳಿ ನಿವಾಸಿ ವರುಣ್‌ಗೌಡ ಪಿ ಅವರು ಮೂರನೇ ಪ್ರಯತ್ನದಲ್ಲಿ 462ನೇ ರ‍್ಯಾಂಕ್ ಪಡೆದಿದ್ದಾರೆ. ಕೊಪ್ಪಳದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದಿದ್ದಾರೆ. ಸ್ವಲ್ಪದಿನ ವೈದ್ಯಾಧಿಕಾರಿ ಆಗಿಯೇ ಸಿದ್ಧತೆ ನಡೆಸಿದರು. ಎಎಸ್‌ಐ ಪ್ರಕಾಶ್ ಆರ್. ಹಾಗೂ ಎಂ.ಪ್ರೇಮಾ ಪೋಷಕರು. ‘ಕಷ್ಟಪಟ್ಟು ಓದಿದ್ದೇನೆ. ಅಪ್ಪ, ಅಮ್ಮ ಸ್ಫೂರ್ತಿದಾಯಕರಾಗಿದ್ದರು ಎಂದರು.
ಸಾಗರ್ ಎ
ಕೋಲಾರ ತಾಲ್ಲೂಕಿನ ಶಾನುಭೋಗನ ಹಳ್ಳಿ ನಿವಾಸಿ ಸಾಗರ್ ಎ ಅವರು ಐದನೇ ಪ್ರಯತ್ನ ದಲ್ಲಿ 641ನೇ ರ‍್ಯಾಂಕ್ ಪಡೆದಿದ್ದಾರೆ. ತಂದೆ ಅಶ್ವಥಪ್ಪ ಹಾಗೂ ತಾಯಿ ಸುಶೀಲಮ್ಮ ಕೃಷಿಕರು. ಬೆಂಗಳೂರಿನ ಡಾ.ಅಂಬೇಡ್ಕರ್ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಇ ಓದಿರುವ ಸಾಗರ್, ಸದ್ಯ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದಾರೆ.
ಈ ಯುವಕರ ಸಾಧನೆ ರಾಜ್ಯದ ಅನೇಕ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರತಿಭೆಗಳು ಹೊರಹೊಮ್ಮುತ್ತಿರುವುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

