ತಾಳಿಕೋಟಿ: ಜಗದ್ಗುರು ಶ್ರೀ ರೇಣುಕಾಚಾರ್ಯರು ಇಡೀ ಮನುಕುಲದ ಏಳಿಗೆ ಬಯಸಿದವರು ಅವರ ಅನುಯಾಯಿಗಳಾದ ನಾವು ಕೇವಲ ಅವರ ಜಯಂತಿ ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ಅನುದಿನವೂ ಅನುಸರಿಸುವ ಅಗತ್ಯ ಇದೆ ಎಂದು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ ಹೇಳಿದರು. ಭಾನುವಾರ ಪಟ್ಟಣದ ಎಪಿಎಂಸಿ ವರ್ತಕರ ಸಭಾಭವನದಲ್ಲಿ ಜಂಗಮ ಸಮಾಜದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಇವತ್ತು ರಾಜ್ಯದಲ್ಲಿ ಶೇ.2 ರಷ್ಟು ಜನಸಂಖ್ಯೆ ಹೊಂದಿರುವ ಜಂಗಮ ಸಮಾಜ ಆರ್ಥಿಕ ಸಾಮಾಜಿಕ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದರುವ ಸಮಾಜವಾಗಿದೆ ಎಂದು ವರದಿಗಳು ಹೇಳುತ್ತವೆ. ಇದರ ಕುರಿತು ನಾವೆಲ್ಲರೂ ಚಿಂತಿಸಿ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಸಮಾಜದ ಒಗ್ಗಟ್ಟನ್ನು ಕಾಪಾಡಿಕೊಂಡು ದುರ್ಬಲರನ್ನು ಮೇಲೆತ್ತುವ ಕೆಲಸವನ್ನು ಎಲ್ಲರೂ ಕೂಡಿಕೊಂಡು ಮಾಡಬೇಕಾಗಿದೆ ಅಂತಹ ಒಂದು ಆತ್ಮಾವಲೋಕನಕ್ಕೆ ಈ ಜಯಂತಿ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದರು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ), ಮಾತನಾಡಿ ಜಂಗಮ ಸಮಾಜ ಗುರುವಿನ ಸ್ಥಾನದಲ್ಲಿರುವ ಸಮಾಜ, ಅದರ ಸಂಖ್ಯೆ ಕಡಿಮೆ ಇದ್ದರೂ ಸಮಾಜದಲ್ಲಿ ಶ್ರೇಷ್ಠ ಗೌರವವನ್ನು ಹೊಂದಿದ್ದು ಎಲ್ಲ ಸಮಾಜಗಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡುವ ಸಮಾಜವಾಗಿದೆ. ಇವತ್ತು ರಾಜಕೀಯ ವ್ಯವಸ್ಥೆ ಹಾಳಾಗಿ ಹೋಗಿದೆ ಇದನ್ನು ಸರಿದಾರಿಗೆ ತರಲು ಎಲ್ಲ ಪೂಜ್ಯರು ಒಗ್ಗೂಡಿ ಕೆಲಸ ಮಾಡಬೇಕೆಂದು ಕೇಳಿಕೊಂಡರು. ಕಲ್ಕೇರಿ ಮಡಿವಾಳೇಶ್ವರ ಶ್ರೀಗಳು ಹಾಗೂ ಶ್ರೀ ಸಂಘಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್ಎಸ್ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಳೆದ ಬಾರಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೊಡೆಕಲ್ಲದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ರಾಮಲಿಂಗಯ್ಯ ಮಹಾಸ್ವಾಮಿಗಳು ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬೇಸಿಗೆ ರಜೆಯಲ್ಲಿ ಸಮಾಜದ ಮಕ್ಕಳಿಗೆ ಧರ್ಮ ಸಂಸ್ಕಾರ ಕಲಿಸಿಕೊಡುವ ವಿಶೇಷ ತರಬೇತಿ ಶಿಬಿರ ತಮ್ಮ ಮಠದಲ್ಲಿ ಹಮ್ಮಿಕೊಂಡಿದ್ದಾರೆ ಇದಕ್ಕೆ ನಾವೆಲ್ಲರೂ ಸಹಕರಿಸೋಣ ಎಂದರು. ನಾವದಗಿ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭವನ್ನು ಉದ್ಘಾಟಿಸಿದರು.ಚಬನೂರ ಶ್ರೀ ರಾಮಲಿಂಗೇಶ್ವರ ಮಠದ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸಾಸನೂರ- ತುಂಬಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕಲಕೇರಿಯ ಸಿದ್ದರಾಮ ಶಿವಾಚಾರ್ಯರು, ಬಲಶೆಟ್ಟಿಹಾಳದ ಸಿದ್ದಲಿಂಗ ದೇವರು,ಲೋಟಗೇರಿಯ ಡಾ.ಗುರುಮೂರ್ತಿ ದೇವರು,ಮುರಗೇಶ ವಿರಕ್ತಮಠ, ಕಾಶಿಬಾಯಿ ಅಮ್ಮನವರು ಸಾನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಶ್ರೀ ಗುರು ಹಿರೇಮಠ, ಪಂಚಾಚಾರ್ಯ ಸಹಕಾರಿ ಸಂಘದ ಅಧ್ಯಕ್ಷ ಮುತ್ತು ಜಹಗೀರದಾರ, ಸಮಾಜದ ಅಧ್ಯಕ್ಷ ಶರಣಯ್ಯ ಹಿರೇಮಠ, ಉಪಾಧ್ಯಕ್ಷ ಶಿವಲಿಂಗಯ್ಯ ಹಿರೇಮಠ, ಕಾರ್ಯದರ್ಶಿ ಈರಯ್ಯ ಹಿರೇಮಠ,ಸಂ.ಕಾ.ಗಜದಂಡಯ್ಯ ಹಿರೇಮಠ,ಸಮಾಜದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು. ಶಿಕ್ಷಕಿ ಸುವರ್ಣಾ ಗದುಗಿನಮಠ,ಡಾ.ಸೋಮಶೇಖರಯ್ಯ ಹಿರೇಮಠ ಹಾಗೂ ಶಿಕ್ಷಕ ರಾಜಶೇಖರ ಹಿರೇಮಠ ನಿರ್ವಹಿಸಿದರು. ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಖಾಸ್ಗತೇಶ್ವರ ಮಠದಿಂದ ಜಂಗಮ ಸಮಾಜದ ತಾಲೂಕ ಗೌರವ ಅಧ್ಯಕ್ಷರಾದ ಪರಮ ಪೂಜ್ಯ ರಾಮಲಿಂಗಯ್ಯ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಆರಂಭಗೊಂಡ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯ ಭವ್ಯ ಮೆರವಣಿಗೆ ಸಕಲ ವಾಧ್ಯ ಮೇಳಗಳೊಂದಿಗೆ ಮುಖ್ಯ ವೇದಿಕೆಗೆ ತಲುಪಿತು.


