ಕೇಂದ್ರದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ನಗರದ ಜನತೆ ಕುಟುಂಬ ಸಮೇತ ಸಡಗರ ಮತ್ತು ಸುರಕ್ಷತೆಯಿಂದ ಆಚರಿಸಲು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವೇದಿಕೆ ಸಿದ್ಧಪಡಿಸಿದೆ. ಮಾರ್ಚ್ 4 ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ಹೋಳಿ ಹಬ್ಬ-2.0 ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದ ಹಾಗೂ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಶೇಖರ ಹಿಟ್ನಾಳ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಈ ಬಾರಿಯ ಹೋಳಿ ಆಚರಣೆಯಲ್ಲಿ ಸಾರ್ವಜನಿಕರ ಮನರಂಜನೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಖ್ಯಾತತ ಡಿಜೆ ನಕುಲ್ ಸಂಗೀತ, ಮಳೆ ನೃತ್ಯದೊಂದಿಗೆ ಹೆಜ್ಜೆ ಹಾಕಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ನಾಡಿನ ಜನಪ್ರಿಯ ನಿರೂಪಕರು ಇಡೀ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮೆರುಗು ನೀಡಲಿದ್ದಾರೆ ಎಂದರು.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನೃತ್ಯ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇಡೀ ಕ್ರೀಡಾಂಗಣವು ಸಿಸಿಟಿವಿ ಕ್ಯಾಮೆರಾಗಳ ಕಣಾವಲಿನಲ್ಲಿ ಇರಲಿದೆ. ಕಾರ್ಯಕ್ರಮಕ್ಕೆ ಬರುವ ಜನರಿಗೆ ಅಸೋಸಿಯೇಷನಿಂದಲೇ ಬೆಳಗಿನ ಉಪಹಾರ ಹಾಗೂ ಬಣ್ಣಗಳನ್ನು ಒದಗಿಸಲಾಗುವುದು. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಾವು ಹೆಚ್ಚಿನ ಒತ್ತು ನೀಡಿದ್ದೇವೆ. ಕೊಪ್ಪಳದ ಜನತೆ ಒಂದೇ ಸೂರಿನಡಿ ನಿರ್ಭಯವಾಗಿ, ಸಡಗರದಿಂದ ಹಬ್ಬ ಆಚರಿಸಲು ಇದು ಉತ್ತಮ ಅವಕಾಶ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀನಿವಾಸ ಗುಪ್ತ, ನಗರಸಭೆ ಮಾಜಿ ಸದಸ್ಯ ರಾಮಣ್ಣ ಹದ್ದಿನ, ಪರಶುರಾಮ ಕಿಡದಾಳ ಇದ್ದರು. ”
ಸದ್ಯದ ಯೋಜನೆಯಂತೆ ಬೆಳಗ್ಗೆ ಮೆರವಣಿಗೆ ನಡೆಸಿ, ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ನಂತರದಲ್ಲಿ ಸಂಭ್ರಮಾಚರಣೆಯ ಹೋಳಿ ಹಬ್ಬ-2.0 ಕಾರ್ಯಕ್ರಮವನ್ನು ಪ್ರಾರಂಭಿಸುವ ಯೋಚನೆ ಇದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಧಾರವನ್ನು ಶೀಘ್ರವೇ ತಿಳಿಸುತ್ತೇವೆ.

Leave a Reply

Your email address will not be published. Required fields are marked *