ನಿನ್ನೆ ಮತ್ತು ಇಂದು ನವದೆಹಲಿಯಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಕೇಂದ್ರದ ಬಜೆಟ್ ಬೇಡಿಕೆಯ ಕುರಿತು ಚರ್ಚೆಯನ್ನು ಏರ್ಪಡಿಸಲಾಗಿದ್ದು, ನಿನ್ನೆ ಸಂಜೆ ಚರ್ಚೆಯ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರನ್ನು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಿ ಕುಮಾರ ನಾಯಕರವರು ಸೌಹಾರ್ದತೆಯಿಂದ ಭೇಟಿಯಾಗಿ ಪುಷ್ಪಗುಚ್ಛವನ್ನು ನೀಡಿದರು.

ಭೇಟಿಯ ಸಂದರ್ಭದಲ್ಲಿ ಮಾನ್ಯ ಖರ್ಗೆ ರವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಕುರಿತು ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಗಳಿಂದ ಅನ್ಯ ರಾಜ್ಯಗಳಿಗೆ ಹಾದು ಹೋಗುತ್ತಿರುವ ರೈಲ್ವೇ ಸಂಪರ್ಕದ ಕುರಿತು ಸಂಸದರೊಡನೆ ಚರ್ಚಿಸಿದರು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಈ ಯೋಜನೆಗಳನ್ನು ವೇಗವಾಗಿ ಜಾರಿಗೆ ತರುವ ಅಗತ್ಯತೆಯನ್ನು ವಿವರವಾಗಿ ಸಂಸದ ಕುಮಾರ ನಾಯಕರಿಗೆ ಮನವರಿಕೆ ಮಾಡಿದರು.

ನಿನ್ನೆ ಬಿಡುವಿಲ್ಲದ ಚಟುವಟಿಕೆಯ ದಿನದಂದು ಸಂಜೆಯಲ್ಲಿ ಕೂಡ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಜಿ ಅವರು ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಯ ಬಗ್ಗೆ ಹಾಗೂ ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಿದ್ದು ನಮ್ಮೆಲ್ಲರ ಮನೋಬಲ ಹೆಚ್ಚಿಸುವುದಲ್ಲದೆ ಸಕ್ರಿಯವಾಗಿ ಕೆಲಸಮಾಡಲು ಪ್ರೇರಣೆ ನೀಡುತ್ತದೆ ಎಂದು ಸಂಸದರು ತಿಳಿಸಿದರು.

Leave a Reply

Your email address will not be published. Required fields are marked *