ತಾಳೆಕೋಟಿ: ಇವತ್ತು ನಮ್ಮ ಪೈಕಿ ಪ್ರತಿಯೊಬ್ಬರಲ್ಲಿ ಜೀವನಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳೂ ಇವೆ ಆದರೆ ಶಾಂತಿ ಮತ್ತು ನೆಮ್ಮದಿ ಎಂಬುದಿಲ್ಲ ಅದನ್ನು ಪಡೆದುಕೊಳ್ಳಲು ಜೀವನಕ್ಕೆ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಪೂಜ್ಯ ಷ.ಬ್ರ. ಶ್ರೀ ರಾಜಗುರು ರಾಜೇಂದ್ರ ಒಡೆಯರ್ ರ್ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಮುತ್ತೈದೆಯರಿಗೆ ಉಡಿತೊಂಬವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತಿ ಪತ್ನಿ ಸಂಸಾರ ಎಂಬ ರಥದ ಎರಡು ಚಕ್ರಗಳು ಅವು ಸರಿಯಾಗಿ ನಡೆದಾಗ ಮಾತ್ರ ಸಂಸಾರ ಸುಂದರವಾಗಲು ಸಾಧ್ಯ. ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ. ಇವತ್ತು ಸಂಸ್ಕಾರಗಳ ಕೊರತೆಯಿಂದಾಗಿ ನಮ್ಮ ಯುವ ಜನತೆ ವ್ಯಸನಿಗಳಾಗುತ್ತಿದ್ದಾರೆ, ಆರೋಗ್ಯ ಎಂಬುದು ಸರ್ವಶ್ರೇಷ್ಠ ಸಂಪತ್ತಾಗಿದೆ ಅದನ್ನು ಕಳೆದುಕೊಂಡು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಶ್ರೀಮಠದ ಪರಮ ಪೂಜ್ಯರು ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಅವರಿಗೆ ನಾವೆಲ್ಲರೂ ತನು-ಮನ ಧನದಿಂದ ಸಹಕರಿಸೋಣ ಎಂದರು. ಪೂಜ್ಯ ಶ್ರೀ ಶಂಕರಾನಂದ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವುದು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. ಉಡಿತುಂಬುವ ಕಾರ್ಯಕ್ರಮದಲ್ಲಿ ಶ್ರದ್ಧೆ ಭಕ್ತಿಯಿಂದ ಭಾಗವಹಿಸಿ.ನಾವದಗಿ ಪೂಜ್ಯರ ಧರ್ಮ ಸೇವೆ ಶ್ಲಾಘನೀಯವಾಗಿದೆ ಇದಕ್ಕೆ ನಿಮ್ಮ ಸಹಕಾರ ಇರಲಿ ಎಂದರು. ಇದೇ ಸಂದರ್ಭದಲ್ಲಿ ನಾವದಗಿ ಪೂಜ್ಯರಿಗೆ ಮಸ್ಕಿ ತಾಲೂಕಿನ ಸುರೇಶ ದಿನ್ನಿಬಾಯಿ ಕುಟುಂಬದ ಸದಸ್ಯರಿಂದ “ತುಲಾಭಾರ” ಹಾಗೂ ತಾಳಿಕೋಟಿ ಜಂಗಮ ಸಮಾಜದಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಸುಮಾರು 300 ಕ್ಕಿಂತಲೂ ಹೆಚ್ಚು ಮುತ್ತೈದೆಯರಿಗೆ ಶಾಸ್ತ್ರೋತ್ತರವಾಗಿ ಉಡಿ ತುಂಬಲಾಯಿತು. ಪೂಜ್ಯಷ.ಬ್ರ. ಶ್ರೀ ರಾಜ ಗುರುರಾಜೇಂದ್ರ ಒಡೆಯರ್ ಶಿವಾಚಾರ್ಯರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಾತೋಶ್ರೀ ಶೋಭಾ ಅಮ್ಮನವರು,ರೇಣುಕಾ ಅಮ್ಮನವರು,ಡಾ.ಎಸ್.ಎಸ್.ದೇಸಾಯಿ,ಪುರಾಣಿಕ ರಾಚಯ್ಯ ಹಿರೇಮಠ,ಡಾ. ಸೋಮಶೇಖರಯ್ಯ ಹಿರೇಮಠ, ಸಾಹಿತಿ ಬಸವರಾಜ ಗೊರಜಿ ಇದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಉಪಸ್ಥಿತರಿದ್ದರು.


