ಮುದ್ದೇಬಿಹಾಳ : ತಾಲೂಕಿನ ನಾಗರಬೆಟ್ಟದ ಪ್ರತಿಷ್ಠಿತ ಬಸ್ ನಿಲ್ದಾಣದ ಹತ್ತಿರವಿರುವ ಆಕ್ಸ್‌ಫರ್ಡ್ ಮಠ್ಸ್
ಸಂಸ್ಥೆಯ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ‘ಎಕ್ಸ್‌ಪರ್ಟ್ ಉತ್ಸವ 2025-26’ ಅಂಗವಾಗಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ವಾಗ್ಮಿ ಹಾಗೂ ಸಾಹಿತ್ಯ ರತ್ನ ಶಿವಶರಣಪ್ಪ ಶಿರೂರ ಮಾತನಾಡಿ, “ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣವು ಹುಲಿ ಹಾಲಿನಂತಿದೆ; ಅದನ್ನು ಕುಡಿದವರು ಗರ್ಜಿಸಲೇಬೇಕು. ಕೇವಲ ಶಾಲೆಯ ಬೋರ್ಡ್‌ಗಳು ಶಿಕ್ಷಣ ನೀಡುವುದಿಲ್ಲ. ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ, ಸಾಧಿಸುವ ಛಲ ಮತ್ತು ಆತ್ಮವಿಶ್ವಾಸ ಇರಬೇಕು. ಆಕ್ಸ್‌ಫರ್ಡ್ ಮಠ್ಸ್ ಸಂಸ್ಥೆಯು ಪಾಠದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಮಕ್ಕಳಿಗೆ ನೀಡುತ್ತಿದೆ,” ಎಂದು ಅಭಿಪ್ರಾಯಪಟ್ಟ ಅವರು “623ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ಗುರಿ ವಿದ್ಯಾರ್ಥಿಗಳಲ್ಲಿ ಇರಬೇಕು. ಗ್ರಾಮೀಣ ಭಾಗದ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಎಪಿಜೆ ಅಬ್ದುಲ್ ಕಲಾಂ ಮತ್ತು ಛತ್ರಪತಿ ಶಿವಾಜಿ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಅನುಸರಿಸಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಪ್ರಯತ್ನಿಸಬೇಕು,” ಎಂದು ಕರೆ ನೀಡಿದರು.
ಕುಂಟೋಜಿಯ ಭಾವೈಕ್ಯತಾ ಸಂಸ್ಥಾನ ಹಿರೇಮಠದ ಷ.ಬ್ರ. ಡಾ. ಶ್ರೀಗುರು ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ಬಿ.ಜಿ. ಮಠ ಅವರ 30 ವರ್ಷಗಳ ಅವಿರತ ಪರಿಶ್ರಮದಿಂದ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ವಸತಿ ಶಾಲೆಯ ಮೂಲಕ ಇಡೀ ಜಿಲ್ಲೆಯಲ್ಲೇ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಇ ಟ್ರಸ್ಟ್ ಅಧ್ಯಕ್ಷ ಬಿ.ಜಿ. ಮಠ ಮಾತನಾಡಿ, “ಜೀವನದಲ್ಲಿ ಹಣಕ್ಕಿಂತ ಒಳ್ಳೆಯ ಗುಣ ಮತ್ತು ಸಂಸ್ಕೃತಿ ಮುಖ್ಯ. ವಿದ್ಯಾರ್ಥಿಗಳು ದುರಾಸೆ ಬಿಟ್ಟು ಗುರಿ ಹಾಗೂ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಂದೆ-ತಾಯಿ ಹಾಗೂ ಶಾಲೆಗೆ ಕೀರ್ತಿ ತರಬೇಕು,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯಕೀಯ (ಮೆಡಿಕಲ್) ಸೀಟು ಪಡೆದ ಸಾಧಕ ವಿದ್ಯಾರ್ಥಿಗಳನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಿದ್ದಯ್ಯ ಮಠ, ಆಡಳಿತಾಧಿಕಾರಿ ಪ್ರಜ್ವಲ್ ಬಿ. ಮಠ, ಪ್ರಾಂಶುಪಾಲರಾದ ಆರ್.ಎ. ಬಾಗವಾನ್, ಎಸ್‌ಡಿಕೆ ಪ್ರೌಢಶಾಲಾ ಮುಖ್ಯಗುರು ವಿರೂ ನಾಯಕ, ಶಿವಯ್ಯ ಹಿರೇಮಠ, ಆರ್.ಎಂ. ಪೂಜಾರಿ ಸೇರಿದಂತೆ ಹಲವಾರು ಗಣ್ಯರು, ಶಿಕ್ಷಕ ವೃಂದ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *