ರಾಯಚೂರು : ಫೆ 20 ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಇಂದು ಬಹುದೊಡ್ಡ ಪರಿವರ್ತನೆ ಕಾಣುತ್ತಿದ್ದು, ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ರಾಯಚೂರು ಜಿಲ್ಲೆ ಲಿಂಗಸಗೂರಿನ ಗೆಜ್ಜಲಗಟ್ಟಾದ ವೀರನಾಗಮ್ಮ ದೇವಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಭಾರತ ಸಾಂಸ್ಕೃತಿಕ ನೆಲೆಯುಳ್ಳ ರಾಷ್ಟ್ರವಾಗಿದ್ದು, ಅನೇಕ ವೈಶಿಷ್ಟ್ಯಗಳ ಸಂಗಮದಿಂದ ಕೂಡಿದೆ. ಪ್ರಮುಖವಾಗಿ ಜ್ಞಾನ, ವಿಜ್ಞಾನ, ಧರ್ಮ, ಸಂಪ್ರದಾಯದ ಪರಿಕಲ್ಪನೆ ನಮ್ಮ ದೇಶದಲ್ಲಿ ಅಗಾಧವಾಗಿದೆ. ಹೀಗಾಗಿ ಭಾರತದ ಹಿರಿಮೆಯನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ ಎಂದು ಹೇಳಿದರು.

 

ನೀವು ಯಾವುದೇ ದೇವರನ್ನು ಆರಾಧಿಸಿ, ಪೂಜಿಸಿ. ಆದರೆ, ಜೀವನವನ್ನು ನ್ಯಾಯ, ನೀತಿ, ಶಾಂತಿ, ಧರ್ಮದಿಂದ ನಡೆಸಬೇಕು ಎಂದಿದೆ ನಮ್ಮ ಸನಾತನ ಧರ್ಮ ಎಂದ ಸಚಿವರು, ಪೂಜಾ ಪದ್ಧತಿ ಮೀರಿದ ಒಂದು ಧರ್ಮವಿದ್ದು, ಅದೇ ‘ಮಾನವ ಧರ್ಮ ವಾಗಿದೆ ಎಂದು ಪ್ರತಿಪಾದಿಸಿದರು.

 

ಸಮಾಜದಲ್ಲಿ ಹಿಂದೆ ಸ್ಪ್ರಶ್ಯ – ಅಸ್ಪ್ರಶ್ಯ ಎಂಬುದಿರಲಿಲ್ಲ. ಅದ್ಹೇಗೋ ನಡುವೆ ಹೊಕ್ಕಿದೆ. ಅಸ್ಪ್ರಷ್ಯತೆಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ. ಹಾಗಾಗಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿ ದೇಶ ಮತ್ತು ಸಮಾಜವನ್ನು ಒಗ್ಗೂಡಿಸುವ ಪ್ರಯತ್ನವನ್ನು ಎಲ್ಲಾ ಮಠಾಧೀಶರು ಮಾಡಬೇಕಿದೆ ಎಂದು ಆಶಿಸಿದರು.

 

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದೆಲ್ಲೆಡೆ ಇಂದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪುನರುತ್ಥಾನದ ಕೈಂಕರ್ಯ ನಡೆದಿದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.

 

ದೇಶದಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಪರಿಚಯ ಮತ್ತು ಶ್ರೀರಾಮನ ಪರಿಚಯಕ್ಕಾಗಿ ರಾಮಾಯಣ ಸರ್ಕ್ಯೂಟ್ ಎಂಬ ಆಧ್ಯಾತ್ಮಿಕ ಪ್ರವಾಸವನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದರು.

 

ದೇಶದಲ್ಲಿ ಶ್ರೀರಾಮನ ಕುರುಹುಗಳಿರುವ ಕ್ಷೇತ್ರಗಳು ಸೇರಿದಂತೆ ಒಟ್ಟು 15 ಧಾರ್ಮಿಕ, ಆಧ್ಯಾತ್ಮಿಕ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೋಯ್ದು ಪರಿಚಯಿಸುವ ಕೈಂಕರ್ಯವನ್ನು ಮಾಡಲಾಗುತ್ತಿದೆ. ಅಯೋಧ್ಯೆ, ಹಂಪಿ, ಚಿತ್ರಕೂಟ, ನಾಸಿಕ್, ನಾಗ್ಪುರ ಹೀಗೆ ಪ್ರಮುಖ ಸ್ಥಳಗಳಿಗೆ ಮಕ್ಕಳಿಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ರೈಲ್ವೆ ಸಂಚಾರ ಆರಂಭಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

 

ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಕೆ.ಎನ್. ನರಸಿಂಹ ಅಡಿಗರವರ ನೇತೃತ್ವದಲ್ಲಿ ವೀರನಾಗಮ್ಮ ದೇವಿ ಪ್ರಾಣ ಪ್ರತಿಷ್ಠಾನೆ ನೆರವೇರಿತು. ಚಿತ್ರದುರ್ಗ, ಬಾಗಲಕೋಟೆ ಭೋವಿ ಗುರುಪೀಠದ ಪೀಠಾಧೀಶರಾದ ಜಗದ್ಗುರು ಇಮ್ಮಡಿ‌ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

 

ಸಮಾರಂಭದಲ್ಲಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಸಿ.ಟಿ.ರವಿ, ಶಾಸಕ ಮಾನಪ್ಪ ವಜ್ಜಲ, ಶಿವರಾಜ ಪಾಟೀಲ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *