ಓವರ್ಟೇಕ್ ವೇಳೆ ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಬಳಿ ನಡೆದಿದೆ.ಬೈಕ್ ಸವಾರನ ನಿಯಂತ್ರಣ ತಪ್ಪಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಶ್ರೀನಿವಾಸ್ (26) ಮತ್ತು ಸಿದ್ದನಗೌಡ (25) ಮೃತಪಟ್ಟಿದ್ದಾರೆ. ಸೊಸೆಯ ಬರ್ತ್ಡೇ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?
ಸೊಸೆಯ ಬರ್ತ್ಡೇ ಹಿನ್ನೆಲೆ ಸ್ನೇಹಿತ ಸಿದ್ದನಗೌಡ ಜೊತೆ ಶ್ರೀನಿವಾಸ್ ತೆರಳುತ್ತಿದ್ದರು. ಮುಸಲಾಪುರದಿಂದ ಹಿರೇಅರಳಹಳ್ಳಿಗೆ ಬೈಕ್‌ನಲ್ಲಿ ಇಬ್ಬರು ಹೋಗುತ್ತಿದ್ದ ವೇಳೆ ಮುಂದೆ ಸಾಗುತ್ತಿದ್ದ ಸ್ಟೀಲ್ ಕ್ವಾಯಿಲ್ ಸಾಗಿಸುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಇಬ್ಬರೂ ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳು ಎನ್ನಲಾಗಿದೆ.

ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವು
ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಿನ್ನೆ ನಡೆದಿದೆ. ಗಾಜರಕೋಟ ಗ್ರಾಮದ ವಿಸ್ಡಮ್ ಶಾಲೆಯ ಪುನೀತ್ ಮೃತ ವಿದ್ಯಾರ್ಥಿ. ನಿನ್ನೆ ಶಾಲೆಯಿಂದ ಬಸ್‌ನಲ್ಲಿ ಮನೆಗೆ ಬರುತ್ತಿದ್ದ ಪುನೀತ್ ಬಸ್‌ನಿಂದ ಕೆಳಗೆ ಇಳಿಯುತ್ತಿದ್ದಂತೆ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿ ಮಗು ಮೃತಪಟ್ಟಿದೆ.

ಪುನೀತ್ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮಗುವಿನ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸ್ ಚಾಲಕನಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹುಟ್ಟುಹಬ್ಬದ ದಿನದಂದೇ ಅಪಘಾತದಲ್ಲಿ ಯುವಕ ದುರ್ಮರಣ
ಹುಟ್ಟುಹಬ್ಬದ ದಿನದಂದೇ ಅಪಘಾತದಲ್ಲಿ ಯುವಕ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಐವರಕಂಡಪುರ ಗ್ರಾಮದಲ್ಲಿ ನಡೆದಿದೆ. ತೋಟದ ಗುಡ್ಡದಹಳ್ಳಿ ನಿವಾಸಿ ಪವನ್ (24) ಮೃತ ಯುವಕ. ನಿನ್ನೆ ಸಂಜೆ 5:45ಕ್ಕೆ ಹುಟ್ಟುಹಬ್ಬದ ಸಂಭ್ರಮ ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸೋಲದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *