ತಾಳಿಕೋಟಿ: ಸಮಾಜದಲ್ಲಿ ಆಧ್ಯಾತ್ಮಿಕ ಕ್ರಾಂತಿಯನ್ನು ತಂದಂತಹ ಎಲ್ಲ ಶರಣರು ಲಿಂಗ ಪೂಜೆ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಂಡಿದ್ದಾರೆ. ಲಿಂಗ ಪೂಜೆಯಲ್ಲಿ ಅಗಾಧವಾದ ಶಕ್ತಿ ಇದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಹೇಳಿದರು.ತಾಲೂಕಿನ ನಾವದಗಿ ಗ್ರಾಮದ ಬ್ರಹನ್ಮಠದ ಪೂಜ್ಯರ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಗುಡ್ಡಾಪುರದ ದಾನಮ್ಮ ದೇವಿಯ 8ನೇ ದಿನದ ಪುರಾಣದಲ್ಲಿ ಸಾಮೂಹಿಕ ಲಿಂಗ ಪೂಜೆ ಸಂಸ್ಕಾರ ಕೊಡುವ ವಿಶೇಷ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಲಿಂಗ ಪೂಜೆಯು ಶಿವನನ್ನು ಆರಾಧಿಸುವ ಒಂದು ಪವಿತ್ರ ಆಚರಣೆಯಾಗಿದೆ. ಅದು ನಮ್ಮಲ್ಲಿ ಏಕಾಗ್ರತೆ, ಶಾಂತಿ ಮತ್ತು ಅಧ್ಯಾತ್ಮಿಕ ಜಾಗೃತಿಯನ್ನು ಹೆಚ್ಚಿಸುತ್ತದೆ. ಮಹಾ ಸಾಧ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮ, ಕಲಬುರ್ಗಿಯ ಶ್ರೀ ಶರಣಬಸಪ್ಪ ಹಾಗೂ ಕಡಕೋಳ ಮಡಿವಾಳೇಶ್ವರರು ಲಿಂಗ ಪೂಜೆಯ ಮೂಲಕವೇ ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡಿದ್ದಾರೆ. ನಾವು ಕೂಡ ಲಿಂಗ ಪೂಜೆಯನ್ನು ಮಾಡುವುದರ ಮೂಲಕ ಈ ಶರಣರ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದರು. ಸಾಹಿತಿ ಬಸವರಾಜ ಗೊರಜಿ ಪ್ರಾಸ್ತಾವಿಕವಾಗಿ ಮಾತನಾಡಿ ನಾವದಗಿ ಶ್ರೀಗಳು ಈ ಭಾಗದ ಭಕ್ತರನ್ನು ಸಂಸ್ಕರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವೆಲ್ಲರೂ ಸೇರಿಕೊಂಡು ಅವರ ಗುರು ಪಟ್ಟಾಧಿಕಾರದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೇವೆ ಇದೇ ರೀತಿಯಾಗಿ ಇದರ ದ್ವಿತೀಯ ವಾರ್ಷಿಕೋತ್ಸವವನ್ನೂ ತನು ಮನ ಧನದೊಂದಿಗೆ ಯಶಸ್ವಿಗೊಳಿಸಲು ಪ್ರಯತ್ನಿಸೋಣ ಎಂದರು. ವೇ.ಮೂ.ರಾಚಯ್ಯ ಹಿರೇಮಠ ಲಿಂಗ ಪೂಜೆಯ ಮಂತ್ರಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀಮಠದ ನೂರಾರು ಭಕ್ತರು ಉಪಸ್ಥಿತರಿದ್ದರು.


