ಮುದ್ದೇಬಿಹಾಳ: ತಾಲ್ಲೂಕಿನ ಕೊನೆಯ ಗ್ರಾಮವಾದ ಡೊಂಕಮಡು ಗ್ರಾಮದಲ್ಲಿ ನಡೆದ ಐತಿಹಾಸಿಕ ಪವಾಡಪುರುಷ ಹಾಗೂ ಸಿದ್ಧಿಪುರುಷ ಗಿರಿಯಪ್ಪ ಮುತ್ಯಾನ ಜಾತ್ರಾ ಮಹೋತ್ಸವವು ಭಕ್ತಿಭಾವ ಮತ್ತು ಸಂಭ್ರಮದ ನಡುವೆ ನಡೆಯಿತು. ಮಂಗಳವಾರದ ಜಾತ್ರಾ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದರ್ಶನ ಪಡೆದರು.
ಜಾತ್ರೆಯ ವೇಳೆ ದೇವಸ್ಥಾನದ ಆವರಣದಲ್ಲಿ ಡೊಳ್ಳಿನ ನಿನಾದ ಹಾಗೂ ಭಕ್ತರ ಜಯಘೋಷಗಳ ಮಧ್ಯೆ ಅಚ್ಚರಿ ಮೂಡಿಸುವ ಘಟನೆ ನಡೆಯಿತು. ಈ ಭಾಗದಲ್ಲಿ ಗಿರಿಯಪ್ಪ ಮುತ್ಯಾನ ಆರಾಧಕರಾಗಿ ಗೌರವಿಸಲ್ಪಡುವ ದ್ಯಾಮಣ್ಣ ದಿಂಡವಾರ ಅವರು ಒಲೆಯ ಮೇಲೆ ಕುದಿಯುತ್ತಿದ್ದ ಅನ್ನ, ಸಾರು ಹಾಗೂ ಬಾಳೆಹಣ್ಣಿನ ಸಿಹಿ ಪಾಯಸದ ಪಾತ್ರೆಗಳಿಗೆ ಬರಿಗೈ ಹಾಕಿ ಪ್ರಸಾದವನ್ನು ತೆಗೆದು ಭಕ್ತರಿಗೆ ವಿತರಿಸಿದರು ಎಂದು ಅಲ್ಲಿದ್ದ ಭಕ್ತರು ತಿಳಿಸಿದ್ದಾರೆ. ಈ ದೃಶ್ಯ ಭಕ್ತರಲ್ಲಿ ಭಕ್ತಿಭಾವ ಮತ್ತು ಆಶ್ಚರ್ಯ ಉಂಟುಮಾಡಿದುದಾಗಿ ಹೇಳಲಾಗಿದೆ.
ಜಾತ್ರೆಯ ಸಂದರ್ಭದಲ್ಲಿ ದೇವವಾಣಿ ನುಡಿದ ಅಜ್ಜನವರು ಈ ವರ್ಷ ಮಳೆ-ಬೆಳೆ ಉತ್ತಮವಾಗಿದ್ದು, ಗ್ರಾಮದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿದೆ ಎಂದು ಭವಿಷ್ಯ ನುಡಿದರು. ಇದರಿಂದ ರೈತರು ಹಾಗೂ ಗ್ರಾಮಸ್ಥರಲ್ಲಿ ಹರ್ಷ ವ್ಯಕ್ತವಾಯಿತು.
ಗಿರಿಯಪ್ಪ ಮುತ್ಯಾನ ಸವಾರ ಮತ್ತು ಜಾತ್ರಾ ಮಹೋತ್ಸವದ ಕುರಿತು ಭಕ್ತರಲ್ಲಿ ಅಪಾರ ನಂಬಿಕೆ ಇದ್ದು, ಇಲ್ಲಿಗೆ ಬರುವವರ ದೀರ್ಘಕಾಲದ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ವಿಶ್ವಾಸವೂ ಗ್ರಾಮಸ್ಥರಲ್ಲಿ ಇದೆ.
ಈ ಬಾರಿಯ ಜಾತ್ರೆಗೆ ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ ಹಾಗೂ ವಿಜಯಪುರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಗ್ರಾಮದ ದೈವ ಮಂಡಳಿ ಹಾಗೂ ಸದಕ್ಷ ಮಂಡಳಿಯವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

