ಮುದಗಲ್: ಸ್ಥಳೀಯ ಸಹನಾ ಶಾಲೆಯಲ್ಲಿ 2026ರ ಸಾಲಿನ ಗಣಿತ ವಸ್ತುಪ್ರದರ್ಶನವು (Maths Expo-2026) ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ, ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಸ್ಥಳೀಯ ಶಿಕ್ಷಣ ಪ್ರೇಮಿ ಮಾಪಾಶ ಡಿ. ಡಿ ಉದ್ಘಾಟಿಸಿದರು. ಗಣಿತವು ಕೇವಲ ಅಂಕಿ-ಅಂಶಗಳ ಆಟವಲ್ಲ, ಅದು ಜೀವನದ ಪ್ರತಿ ಹಂತದಲ್ಲೂ ಅಡಗಿರುವ ಅದ್ಭುತ ಕಲೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.ಶಾಲೆಯ ನೂರಾರು ವಿದ್ಯಾರ್ಥಿಗಳು ಗಣಿತಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು (Models) ಪ್ರದರ್ಶಿಸಿದರು.ಪೈಥಾಗೋರಸ್ ಪ್ರಮೇಯದ ಪ್ರಾಯೋಗಿಕ ಮಾದರಿಗಳು, ಜ್ಯಾಮಿತೀಯ ಆಕೃತಿಗಳ ರಚನೆ,ವೇಗವಾಗಿ ಲೆಕ್ಕ ಮಾಡುವ ವೈದಿಕ ಗಣಿತದ ಸೂತ್ರಗಳು,ದೈನಂದಿನ ಜೀವನದಲ್ಲಿ ಗಣಿತದ ಬಳಕೆ ಕುರಿತಾದ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಾಲಕರು ಮತ್ತು ಸಾರ್ವಜನಿಕರು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಸಂಕೀರ್ಣವಾದ ಲೆಕ್ಕಗಳನ್ನು ಮಕ್ಕಳು ಸರಳವಾಗಿ ವಿವರಿಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಶಾಲೆಯ ಮುಖ್ಯೋಪಾಧ್ಯಾಯ ಆದಪ್ಪ ಅವರು ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ವೇದಿಕೆಗಳು ಸಹಕಾರಿ ಎಂದು ಅವರು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿಯರಾದ ಎಂ. ಜಾಹೇದ್ ಹುಸೇನ್ ಮಾತನಾಡಿ ಸಹನಾ ಶಾಲೆಯು ಯಾವಾಗಲೂ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡುತ್ತದೆ” ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗಾಗಿ ಉಪಹಾರದ ವ್ಯವಸ್ಥೆ ಸಂಸ್ಥೆಯ ವತಿಯಿಂದ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಆಯೇಶಾ ಬಾನು, ಪ್ರಿಯಾಂಕ,ಕವಿತಾ, ನೀಲು ಬಾಯಿ, ಹೀನ ಬೇಗಂ, ಜೀಶಾನ್, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮವನ್ನು ಶಿಕ್ಷಕಿಯಾದ ಅಸ್ಮ ಬೇಗಂ ನಿರೂಪಿಸಿದರು.
