ಮಾನ್ವಿ : ತಾಲೂಕಿನ ಹಿರೇಕೊಟ್ಟೆಕಲ್ ಗ್ರಾಮದಲ್ಲಿ ರಸ್ತೆ ಅಗಲೀಕರಣದ ವೇಳೆ ತೆರವುಗೊಳಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕವನ್ನು ಮರುಸ್ಥಾಪನೆ ಮಾಡದೆ ಅಧಿಕಾರಿಗಳು ಅವಮಾನ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಪ್ರಭುರಾಜ್ ಕೊಡ್ಲಿ ಹೇಳಿದರು.
ಅವರಿಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಮಾನ್ವಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 10–12 ವರ್ಷಗಳ ಹಿಂದೆ ಗ್ರಾಮದಲ್ಲಿ ಸ್ಥಾಪಿಸಲಾದ ನಾಮಫಲಕವನ್ನು ರಸ್ತೆ ಅಗಲೀಕರಣದ ಸಂದರ್ಭದಲ್ಲಿ 1 ವಾರದಲ್ಲಿ ಮರುಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿ ತೆರವುಗೊಳಿಸಲಾಯಿತು. ಆದರೆ ಹಲವು ತಿಂಗಳು ಕಳೆದರೂ ನಾಮಫಲಕ ಮರುಸ್ಥಾಪನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಅಂಬೇಡ್ಕರ್ ಅನುಯಾಯಿಗಳಿಗೆ ಹಾಗೂ ದಲಿತ ಸಮುದಾಯಕ್ಕೆ ಅಪಮಾನಕರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಕಳೆದ 3–4 ತಿಂಗಳಿಂದ ತಹಸೀಲ್ದಾರ್ ಕಚೇರಿಗೆ ಸುಮಾರು 30–40 ಬಾರಿ ಭೇಟಿ ನೀಡಿ ಮನವಿ ಸಲ್ಲಿಸಿದರೂ ತಹಸೀಲ್ದಾರ್ ಹಾಗೂ ರಸ್ತೆ ಅಗಲೀಕರಣದ ಅಧಿಕಾರಿಗಳಾದ ವಿಕಾಸ್ ಮತ್ತು ಸುಬ್ರಮಣ್ಯ ಅವರು ಸ್ಪಷ್ಟ ಕ್ರಮ ಕೈಗೊಳ್ಳದೆ ದಿನಾಲೂ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ಫೆಬ್ರವರಿ 23, 2026 ರಂದು ಹಿರೇಕೊಟ್ಟೆಕಲ್ ಗ್ರಾಮದ ಮುಖ್ಯ ರಸ್ತೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಾಮಫಲಕ ಮರುಸ್ಥಾಪನೆ ಆಗುವವರೆಗೆ ಬೃಹತ್ ಧರಣಿ ಸತ್ಯಾಗ್ರಹ ಹಾಗೂ ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣ ಬಾಗಲವಾಡ ಕೂಡ ಮಾತನಾಡಿ, ಅಂಬೇಡ್ಕರ್ ಅವರ ನಾಮಫಲಕ ಮರುಸ್ಥಾಪನೆ ವಿಚಾರದಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಮುದಾಯದ ಗೌರವ ಕಾಪಾಡುವ ನಿಟ್ಟಿನಲ್ಲಿ ತೀವ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು. ಅಂದು ನಡೆಯುವ ಹೋರಾಟದಲ್ಲಿ ತಾಲ್ಲೂಕಿನ ಎಲ್ಲಾ ಸಮುದಾಯದ ಹೋರಾಟಗಾರರು, ದಲಿತ ಪರ ಸಂಘಟನೆಗಳ ಮುಖಂಡರು, ಅಂಬೇಡ್ಕರ್ ಅನುಯಾಯಿಗಳು, ವಕೀಲರು, ಯುವಕರು ಹಾಗೂ ಬುದ್ದಿಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವರಾಜ್ ಚಾನೇಕಲ್, ಬುಡ್ಡಪ್ಪ ನಾಯಕ ಮಲ್ಲಿನಮಡ್ಗು, ಚಲುವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಶಿವರಾಜ್ ಉಮಳಿಹೊಸೂರು, ನರಸಪ್ಪ ಜೂಕುರ್, ನರಸಿಂಹ ರಾಜೊಳ್ಳಿ, ದತ್ತಾತ್ರೇಯ ಹಿರೇಕೊಟ್ನೆಕಲ್, ಕಾಮೇಶ್, ಹಂಪಯ್ಯ ನಾಯಕ ಸೇರಿದಂತೆ ಇನ್ನಿತರರು ಇದ್ದರು.

