ತಾಳಿಕೋಟಿ: ಮನುಷ್ಯ ಸಂಪಾದಿಸುವ ಸಕಲ ಸಂಪತ್ತುಗಳಲ್ಲಿ ವಿದ್ಯೆ ಸರ್ವಶ್ರೇಷ್ಠ ಸಂಪತ್ತಾಗಿದೆ ಅದು ನಮ್ಮ ಬದುಕಿಗೆ ಘನತೆ ತಂದು ಕೊಡುತ್ತದೆ. ಸಮುದಾಯಗಳ ಪ್ರಗತಿ ಹಾಗೂ ಅವನತಿ ಶಿಕ್ಷಣವನ್ನೇ ಅವಲಂಬಿಸಿದೆ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು. ಪಟ್ಟಣದ ರಿಲಾಯನ್ಸ್ ಎಜುಕೇಷನ್ ಸೊಸೈಟಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ “ಮೆಜೆಸ್ಟಿಕ್ ವಿಷನ್ 2k26” ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಇವತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರಗಳನ್ನೂ ಕಲಿಸಿ ಕೊಡುವ ಅಗತ್ಯವಿದೆ. ಸಮಾಜಕ್ಕೆ ಕಲಿತವರಿಂದ ಕೇಡಾಗಬಹುದು ಆದರೆ ಸಂಸ್ಕಾರವಂತರಿಂದ ಕೇಡಕಾಗಲು ಸಾಧ್ಯವಿಲ್ಲ. ನಾಲ್ಕು ದಶಕಗಳಿಂದ ಈ ಸಂಸ್ಥೆಯನ್ನು ನಡೆಸುತ್ತಿರುವುದು ಅಧ್ಯಕ್ಷ ನಮಾಜಕಟ್ಟಿ ಅವರ ಪರಿಶ್ರಮ ಹಾಗೂ ಸಾಮೂದಾಯಿಕ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು. ಸಮಾರಂಭ ಉದ್ಘಾಟಿಸಿ ಬಿಇಓ ಸಾವಳಗಿ ಅವರು ಮಾತನಾಡಿ ಮಕ್ಕಳಲ್ಲಿ ಇವತ್ತು ಶಿಕ್ಷಣದ ಜೊತೆ ವಿಶ್ವಮಾನವ ಕಲ್ಪನೆಯನ್ನು ಬೆಳೆಸಬೇಕಾಗಿದೆ, ಅವರನ್ನು ದೇಶದ ಒಳ್ಳೆಯ ಪ್ರಜೆ ಹಾಗೂ ಸಮಾಜದ ಜವಾಬ್ದಾರಿಯುತ ನಾಗರಿಕನನ್ನಾಗಿ ಮಾಡುವುದು ಅಗತ್ಯವಾಗಿದೆ ಎಂದರು. ಕಾಂಗ್ರೆಸ್ ಯುವ ಮುಖಂಡ ಸುರೇಶಧಣಿ ನಾಡಗೌಡ(ಬಿಂಜಲಭಾವಿ) ಅವರು ಮಾತನಾಡಿ ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗಬಾರದು, ದೇಶದ ಭವಿಷ್ಯ ನಿರ್ಮಿಸುವ ಕೆಲಸ ಅವರು ಮಾಡುತ್ತಿದ್ದಾರೆ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಕ್ಕಳ ಸರ್ವಾಂಗೀಣ ಪ್ರಗತಿಯಲ್ಲಿ ತಾಯಂದಿರ ಪಾತ್ರ ಬಹು ದೊಡ್ಡದಾಗಿದೆ ಈ ಸಂಸ್ಥೆಯಲ್ಲಿ ಶಿಕ್ಷಣ ಜೊತೆ ಸಂಸ್ಕಾರವನ್ನು ಕೊಡುವ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು. ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಸಾನಿಧ್ಯ ವಹಿಸಿದ್ದರು. ರಿಲಾಯನ್ಸ್ ಎಜುಕೇಶನ್ ಸೊಸೈಟಿ ಚೇರಮನ್ ಎ.ಎಸ್.ನಮಾಜಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ಅನುಪಮ ಸೇವೆ ಸಲ್ಲಿಸಿದ ಆದರ್ಶ ಶಿಕ್ಷಕ ಜಿಲಾನಿ ವಿಜಾಪೂರ ಇವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇಸಿಓ ಆರ್.ಬಿ.ದಮ್ಮೂರಮಠ, ನಿವೃತ್ತ ಶಿಕ್ಷಕ ಸೈಯದ್ ಫಸಿಯುದ್ದೀನ ಖಾಜಿ, ಅಂಜುಮಾನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಜಾಕ ಮನಗೂಳಿ,ವಕೀಲ ಐ.ಎ.ಜಮಾದಾರ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿರೇಶ ಮೇಟಿ, ನಿವೃತ್ತ ರಿಜಿಸ್ಟ್ರರ್ ಐ.ಎ.ಭಕ್ಷಿ,ಡಾ.ಸಿರಾಜ ಬಳಿಗಾರ,ಅಬೂಬಕರ ಲಾಹೋರಿ,ಶಫೀಕ ಇನಾಮದಾರ,ಬಂದಗಿಸಾಬ ವಠಾರ,ಬಾಲು ತಳವಾರ, ಸಿಆರ್‌ಸಿಗಳಾದ ರಾಜು ವಿಜಾಪುರ,ಜಾವೀದ ಎಕೀನ,ಇಬ್ರಾಹೀಮ ಆಲಮೇಲ, ಪ್ರಾಚಾರ್ಯರಾದ ಮೊಹಮ್ಮದ್ ಅಶ್ಫಾಕ್,ಗುಲಾಮ ಡೋಣಿ,ಫಾರೂಖ ಬಿಳವಾರ, ಆರೀಫ ಕಂಕರವಾಲೆ,ಮೊಹಮ್ಮದ ಇಸಾಕ್, ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ವರ್ಗ ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.


