ತಾಳಿಕೋಟೆ: ಪಟ್ಟಣದ ಬ್ರಹ್ಮಕುಮಾರಿ ಪಾಠಶಾಲೆಯ ವತಿಯಿಂದ ಶಿವಜಯಂತಿ ಅಂಗವಾಗಿ ಪಟ್ಟಣದ ಗಣೇಶ ನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಹಿಂದುಗಡೆ ಇರುವ ದಿವ್ಯ ಸಂಗಮ ಭವನದಲ್ಲಿ ಆಯೋಜಿಸಿರುವ ಆಧ್ಯಾತ್ಮಿಕ ಶಿವಾನುಭವಗೋಷ್ಠಿ ಅಂಗವಾಗಿ ಭಾನುವಾರ ವಿಶ್ವಶಾಂತಿಯಾತ್ರೆ ಜರುಗಿತು. ಬ್ರಹ್ಮಕುಮಾರಿ ಪಾಠಶಾಲೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ 12 ಜ್ಯೋತಿರ್ಲಿಂಗಗಳ ಮಾದರಿ ಪ್ರತಿರೂಪಕಗಳು ಹಾಗೂ ಸನಾತನ ಧರ್ಮದ ದೇವತೆಗಳ ಸ್ಥಬ್ದ ಚಿತ್ರಗಳ ಭವ್ಯ ಮೆರವಣಿಗೆಯ ಶಾಂತಿ ಯಾತ್ರೆಗೆ ನಾವದಗಿ ಗ್ರಾಮದ ಪರ್ವತೇಶ್ವರ ಬ್ರಹನ್ಮಠದ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಕೊಡೆಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿ, ಚಬನೂರಿನ ರಾಮಲಿಂಗಯ್ಯಮಠದ ರಾಮಲಿಂಗಸ್ವಾಮೀಜಿ, ಗುರುಮೂರ್ತಿದೇವರು ಲೋಟಗೇರಿ ಚಾಲನೆ ನೀಡಿದರು.ಶಾಂತಿಯಾತ್ರೆಯಲ್ಲಿ 12 ಜ್ಯೋತಿರ್ಲಿಂಗಗಳ ಹಾಗೂ ಸನಾತನ ಧರ್ಮದ ದೇವತೆಗಳ ಸ್ಥಬ್ದ ಚಿತ್ರಗಳ ಭವ್ಯ ಮೆರವಣಿಗೆಯು ಮೆರವಣಿಗೆಯಲ್ಲಿ ಕುಂಭಮೇಳ, ಡೊಳ್ಳುಕುಣಿತ , ಭಾಜಾಭಜಂತ್ರಿ ಸಹಿತ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.ದಾರಿಯುದ್ದಕ್ಕೂ ಭಕ್ತಾದಿಗಳು ರಂಗವಲ್ಲಿ ಚಿತ್ತಾರ ಬಿಡಿಸಿ ದೆವತೆಗಳ ರೂಪಕಗಳಲ್ಲಿ ಮಕ್ಕಳನ್ನು ನಿಲ್ಲಿಸಿ , ಹೂಮಳೆ ಸುರಿಸಿ ಶಾಂತಿ ಯಾತ್ರೆಗೆ ಬೆಂಬಲಿಸಿದರು.
ಸಂಚಾಲಕಿ ಬ್ರಹ್ಮಕುಮಾರಿ ಪ್ರೇಮಾ ಪಾಟೀಲ, ಎಚ್.ಎಸ್.ಪಾಟೀಲ, ಬಾಪುಗೌಡ ಬಿರಾದಾರ, ದೇವರಾಜ ಬಾಗೇವಾಡಿ, ಶ್ರೀಶೈಲ ಹಿರೇಮಠ, ನಾನಾಗೌಡ ಬಸರೆಡ್ಡಿ, ಕಾಶಿಲಿಂಗ ಕಲಬುರ್ಗಿ, ಕಾಶಿನಾಥ ಸಜ್ಜನ, ಎನ್.ಎನ್.ಕುಂಬಾರ, ನಾನಾಗೌಡ ಪಾಟೀಲ, ವಿಠ್ಠಲ ವಿಜಾಪುರ, ನಿಂಗಣ್ಣ ಯಡಹಳ್ಳಿ, ಆರ್.ಬಿ.ದಾನಿ, ಪುಷ್ಪಾ ಪಾಟೀಲ, ಲಲಿತಾ ಕಲಬುರ್ಗಿ, ಶಾಂತಾಬಾಯಿ ಸಜ್ಜನ ಸೇರಿದಂತೆ ನಾವದಗಿ. ಬ.ಸಾಲವಾಡಗಿ, ಭಂಟನೂರ, ಮಿಣಜಗಿ, ತುಂಬಗಿ, ಫತ್ತೆಪುರ, ಬೋಳವಾಡ, ಬೊಮ್ಮನಹಳ್ಳಿ, ಮೈಲೇಶ್ವರ ಹಾಗೂ ಪಟ್ಟಣದ ಭಕ್ತಾದಿಗಳು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಶಿವಾನುಭವ ಗೋಷ್ಠಿ ನೆರವೇರಿತು.

