ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಫೆ.11ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ರಾಯಚೂರು ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ನಡೆಸಿದರು.
ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಈಗಿನ ಮಹಾನಗರ ಪಾಲಿಕೆಯ ಕಚೇರಿಯ ಕೋರ್ಟ ಹಾಲನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಆಯುಕ್ತರು, ರಾಯಚೂರು ಸಿಟಿ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಸೇರಿದಂತೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಾರ್ಯವು ಇನ್ಮುಂದೆ ಸಹ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚನೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯಿಂದ ಸಿಟಿಯಲ್ಲಿ ಈಗ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳು ಮತ್ತು ನಗರ ಸೌಂದರ್ಯೀಕರಣ ಕಾರ್ಯಗಳನ್ನು ಯಥಾವತ್ತು ಮುಂದುವರೆಸಬೇಕು. ಸುಗಮ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸಿಟಿಯಲ್ಲಿನ ಎಲ್ಲ ಕಡೆಗೆ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ರಾಯಚೂರು ಸಿಟಿಯಲ್ಲಿ ಒಟ್ಟು 35 ವಾರ್ಡಗಳಿದ್ದು, ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ನಗರದಿಂದ 20 ರಿಂದ 30 ಕಿ.ಮೀ ದೂರದಲ್ಲಿವೆ. ಕೃಷ್ಣ ನದಿಯಿಂದ ಶೇ.80ರಷ್ಟು ಮತ್ತು ತುಂಗಭದ್ರಾ ನದಿಯಿಂದ ಶೇ.20 ಪ್ರಮಾಣದಷ್ಟು ನೀರು ಪಡೆಯಲಾಗುತ್ತಿದೆ. ಚಿಕ್ಕಸೂಗೂರನಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕ ಮತ್ತು ರಾಂಪೂರ ಬಳಿಯಲ್ಲಿನ ಕುಡಿಯುವ ನೀರು ಶುದ್ಧೀಕರಣ ಘಟಕದ ಮೂಲಕ ನದಿ ನೀರನ್ನು ಶುದ್ಧೀಕರಣಗೊಳಿಸಿ ನಗರಕ್ಕೆ ನೀರು ಪೂರೈಸಲಾಗುತ್ತಿದೆ.
ರಾಯಚೂರು ಸಿಟಿಯಲ್ಲಿ ಒಟ್ಟು 650 ಕಿ.ಮೀ ರಸ್ತೆ ಜಾಲದ ವ್ಯವಸ್ಥೆಯಿದೆ. ಇತ್ತೀಚಿನ ಒಳಚರಂಡಿ ಜಾಲದ ಉದ್ದ 300 ಕಿ.ಮೀ ಇರುತ್ತದೆ. 73,000 ಮನೆಗಳು ಇರುತ್ತವೆ. ಸಿಟಿಯಲ್ಲಿ ಇದುವರೆಗೆ 431 ಕಿ.ಮೀ ನಷ್ಟು ಒಳಚರಂಡಿ ಜಾಲದ ವ್ಯವಸ್ಥೆ ಇದ್ದು ಈ ಪೈಕಿ 300 ಕಿ.ಮೀ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಸಭೆಗೆ ವಿವರಿಸಿದರು.
ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರವನ್ನು ಸೌಂದರ್ಯೀಕರಣಗೊಳಿಸಲು ಬೇಸಿಗೆ ಕಾಲದಲ್ಲಿ ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ವಾಯು ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ವಿಶೇಷವಾಗಿ ವಾಯುಮಾಲಿನ್ಯ ನಿಯಂತ್ರಿಸಿ ನಗರವನ್ನು ಪರಿಸರ ಸ್ನೇಹಿ ನಗರವನ್ನಾಗಿ ರೂಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರ ನೆಡುವುದು ಅವಶ್ಯವಿರುವ ಕಾರಣ 99.99 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲು ಅಂದಾಜು ಪತ್ರಿಕೆಯನ್ನು ಸಿದ್ಧಪಡಿಸಿದ್ದು ಆಡಳಿತಾತ್ಮಕ ಅನುಮೋದನೆ ಪಡೆದು ಕಾರ್ಯಗತಗೊಳಿಸಲಾಗುವುದು ಎಂದು ಇದೆ ವೇಳೆ ಪಾಲಿಕೆಯ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲಿಕೆಯ ಸಮಿತಿಯ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಶರಣಪ್ಪ ಸತ್ಯಂಪೇಟೆ, ಸಂತೋಷ ರಾಣಿ ಸೇರಿದಂತೆ ಪಾಲಿಕೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *