ಲಿಂಗಸಗೂರು : ಫೆ 13 .ಕೇಂದ್ರ ಸರ್ಕಾರದ ದುಡಿಯುವ ವರ್ಗದ ವಿರೋಧಿ 4 ಕರಾಳ ಕಾರ್ಮಿಕ ಸಂಹಿತೆ(ಲೇಬರ್ ಕೋಡ್)ಗಳ ವಿರುದ್ಧ ಮತ್ತು ದುಡಿಯುವ ಜನರು ಸೇರಿದಂತೆ ಎಲ್ಲಾ ಜನರ ಹಕ್ಕುಗಳು ಮತ್ತು ಬದುಕಿನ ಮೇಲೆ ನಡೆಸುತ್ತಿರುವ ಅತ್ಯಂತ ನಿರ್ಣಯವಾದ ಸರ್ವಾಗೀಣ ದಾಳಿಯ ವಿರುದ್ಧ ಫೆಬ್ರುವರಿ 12, ರಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ( AIUTUC) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಸಹಾಯಕ ಆಯುಕ್ತರ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದರು.

ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಾರ್ವಜನಿಕ ಸೇವೆಗಳನ್ನು ಖಾಸಗೀಕರಿಸುತ್ತ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ಮುಂದುವರೆಸಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದರ ಮಧ್ಯೆ ನರೇಗಾ ಯೋಜನೆಯನ್ನು ವಿಬಿ-ಜಿ-ರಾಮ್ ಎಂದು ಬದಲಿಸಿ ಉದ್ಯೋಗ ಖಾತ್ರಿಯ ಹಕ್ಕನ್ನೇ ಕಸಿದುಕೊಂಡು, ಹಳ್ಳಿಯ ಬಡಜನರ ಆಸರೆಯನ್ನು ಕಿತ್ತುಕೊಂಡಿದೆ. ವಿದ್ಯುತ್ ತಿದ್ದುಪಡಿ ಮಸೂದೆ – 2025ನ್ನು ಕಾಯ್ದೆ ಮಾಡಿ, ವಿದ್ಯುತ್ ಸರಬರಾಜು ಖಾಸಗೀಕರಣಗೊಳಿಸಲು ಮುಂದಾಗಿದ್ದು, ಇದುವರೆಗೂ ರಕ್ಷಿಸಲ್ಪಟ್ಟಿದ್ದ ವಿಮಾ ಕಂಪನಿಗಳನ್ನು ಶೇ. 100 ರಷ್ಟು ವಿದೇಶಿ ಮತ್ತು ದೇಶಿಯ ವ್ಯಾಪಾರಿ ಮನೆತನಗಳಿಗೆ ತೆರೆದಿರುವುದು ಅತ್ಯಂತ ಆತಂಕದಿಂದ ಗಮನಿಸುತ್ತಿದ್ದೇವೆ. ಅಣುಶಕ್ತಿ ಅಭಿವೃದ್ಧಿಪಡಿಸುವ (ಶಾಂತಿ) ಹೆಸರಿನಲ್ಲಿ ಜನರ ಸುರಕ್ಷತೆಗೆ ಆಣುಶಕ್ತಿ ಭದ್ರತೆಗೆ ಅಪಾಯವನ್ನು ತಂದಿದೆ. ಈಗ ಕಾರ್ಮಿಕರ ಪ್ರತಿರೋಧವನ್ನು ತಡೆಗಟ್ಟಲು, ವ್ಯಾಪರ ಸುಗಮಗೊಳಿಸುವ ಉದ್ದೇಶದಿಂದ ತಮ್ಮ ಸರ್ಕಾರವು ಲೇಬರ್ ಕೋಡ್ ಗಳನ್ನು ಅನುಷ್ಠಾನಗೊಳಿಸುತ್ತಿದೆ. ಮುಷ್ಕರದ ಹಕ್ಕನ್ನು ಕಸಿದುಕೊಳ್ಳುವ, ಕಾರ್ಮಿಕರ ಸಾಮೂಹಿಕ ಚೌಕಾಸಿ ಹಕ್ಕನ್ನು ಮೊಟಕುಗೊಳಿಸುವ, ನಿಗದಿತ ಅವಧಿಗೆ ಉದ್ಯೋಗದ ಮೂಲಕ ಖಾಯಂ ಸ್ವರೂಪದ ಕೆಲಸಗಳಿಗೆ ತಿಲಾಂಜಲಿ ನೀಡುತ್ತಿರುವುದು, ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಿಸಿರುವುದು ಮತ್ತು ಮಹಿಳಾ ಉದ್ಯೋಗಿಗಳಿಗೆ ರಾತ್ರಿ ಪಾಳೀಯಲ್ಲೂ ದುಡಿಸಿಕೊಳ್ಳಲು ಅವಕಾಶ ನೀಡುವ ಈ ಲೇಬರ್ ಕೋಡ್ ಗಳು ಕಾರ್ಮಿಕರ ಆರೋಗ್ಯ, ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ, ತ್ಯಾಗ – ಬಲಿದಾನಗಳ ಮೂಲಕ ಗಳಿಸಿಕೊಂಡ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಸ್ಕೀಮ್ ಗಳಲ್ಲಿ ದುಡಿಯುವ ಕೋಟ್ಯಾಂತರ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರನ್ನು ಸರ್ಕಾರಿ ನೌಕರರ ಸ್ಥಾನಮಾನ ನೀಡದೇ, ಕನಿಷ್ಠ ವೇತನ ಮತ್ತು ಪಿಎಫ್, ಇಎಸ್‌ಐ, ನಿವೃತ್ತಿ ಪರಿಹಾರಗಳನ್ನು ಒದಗಿಸದೇ ಬಿಡಿಗಾಸಿನಲ್ಲಿ ದುಡಿಸಿಕೊಂಡು ಶೋಷಿಸಲಾಗುತ್ತಿದೆ. ಗುತ್ತಿಗೆ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಕಾರ್ಮಿಕರು, ವಲಸೆ ಕಾರ್ಮಿಕರು, ಗಿಗ್ ಫ್ಲಾಟ್ ಫಾರ್ಮ್ ಕಾರ್ಮಿಕರು, ಅಪಾರ ಸಂಖ್ಯೆಯ ಅನೌಪಚಾರಿಕ, ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಇಲ್ಲದೆ ನಿರ್ದಯ ಶೋಷಣೆಗೆ ಗುರಿ ಮಾಡಲಾಗಿದೆ. ಆದ್ದರಿಂದ ದೇಶದ ಸಂಪತ್ತನ್ನು ಸಂರಕ್ಷಿಸಲು, ದುಡಿಯುವ ಜನರ ಜೀವನೋಪಾಯ ಮತ್ತು ಹಕ್ಕುಗಳನ್ನು ಉಳಿಸಲು, ಎಲ್ಲಾ ಮಾನವ ವಿರೋಧಿ ಮಸೂದೆ – ನೀತಿಗಳನ್ನು ಜಾರಿಗೆ ತರುವುದನ್ನು ಹಿಂಪಡೆಯಬೇಕು 4ಕರಾಳ ಲೇಬರ್ ಕೋಡ್ ಗಳನ್ನು ಹಿಂಪಡೆಯಬೇಕು. ವಿಬಿ.ಜಿ ರಾಮ್.ಜಿ, ವಿಮಾ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ, ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿದರು .
ಈ ಸಂದರ್ಭದಲ್ಲಿ ಎಐಡಿವೈಒ ಸಂಘಟನೆಯ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ, ವಸತಿನಿಲಯ ಕಾರ್ಮಿಕರಾದ ಹನಮರಡ್ಡೆ, ಶಿವರಾಜ್, ಆಶಾ ಕಾರ್ಯಕರ್ತೆಯರಾದ, ಜಯಲಕ್ಷ್ಮಿ, ಲಲಿತ, ಶಿವಮ್ಮ, ರುದ್ರಮ್ಮ, ದೇವಮ್ಮ, ಗದ್ದೆಮ್ಮ ನಾಗಮ್ಮ, ತಿರುಪತಿ ಗೋನವಾರ ಮುಂತದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *