ಪ್ರಾಣಿಗಳ ಬಗ್ಗೆ ದಯೆ ತೋರುವುದು ಮಾನವೀಯತೆಯ ಲಕ್ಷಣ. ಪ್ರಾಣಿ ಸಂರಕ್ಷಣೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದರು.ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಾಣಿ ಕಲ್ಯಾಣವು ಕೇವಲ ಪ್ರಾಣಿಗಳ ರಕ್ಷಣೆಗಷ್ಟೇ ಸೀಮಿತವಲ್ಲ, ಅದು ಸಾರ್ವಜನಿಕ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರವಾಗಿ ಸಂಬಂಧಿಸಿದೆ. ಪ್ರಾಣಿಗಳ ಮೇಲೆ ಹಿಂಸೆ ತಡೆಯುವುದು ಹಾಗೂ ಅವುಗಳಿಗೆ ಸೂಕ್ತ ಆಶ್ರಯ, ಆಹಾರ ಮತ್ತು ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಸಮಾಜದ ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳ ಜನಸಂಖ್ಯೆ ನಿಯಂತ್ರಣ, ನಿಯಮಿತ ಲಸಿಕಾ ಕಾರ್ಯಕ್ರಮ, ರೇಬೀಸ್ ತಡೆ ಹಾಗೂ ಪಶು ವೈದ್ಯಕಿಯ ಶಿಬಿರಗಳನ್ನು ಸಮನ್ವಯದೊಂದಿಗೆ ನಡೆಸುವ ಅಗತ್ಯವಿದೆ ಎಂದರು.

ಪಶುಪಾಲನಾ ಇಲಾಖೆಯ ಜಂಟಿ ನಿರ್ದೇಶಕ ಡಾ. ರಮೇಶ ದೊಡ್ಡಮನಿ ಮಾತನಾಡಿ, ವೈದ್ಯರು ಈ ತಾಂತ್ರಿಕ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಣಿಗಳಿಗೆ ಹಿಂಸೆಯಾಗದಂತೆ ವೈಜ್ಞಾನಿಕವಾಗಿ ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು ಎಂದರು.

ಪ್ರಶಂಸೆ ಪತ್ರ ವಿತರಣೆ

 

ಬೀದಿ ನಾಯಿಗಳ ನಿಯಂತ್ರಣದ ಕುರಿತು ಸುಪ್ರಿಂ ಸೂಚನೆಯಂತೆ ಕಾರ್ಯನಿರ್ವಹಿಸಿ ಶೇ. 100ರಷ್ಟು ಪ್ರಗತಿ ಸಾಧಿಸಿರುವುದಕ್ಕಾಗಿ ಯಲಬುರ್ಗಾ ಮತ್ತು ಕುಕನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಹಾಗೂ ಕಾರಟಗಿ ಪುರಸಭೆಯ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಅವರಿಗೆ ಕಾರ್ಯಾಗಾರದಲ್ಲಿ ಪ್ರಶಂಸಾ ಪತ್ರ ವಿತರನೆ ಮಾಡಲಾಯಿತು.

ಕೊಪ್ಪಳ ಡಿಎಫ್ಓ ಕೆ. ನಿರ್ಮಲಾ, ವಿಷಯ ತಜ್ಞರಾದ ಬೀದರ ಪಶುವೈದ್ಯಕಿಯ ಮಹಾವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ಡಾ. ವಿವೇಕ ಕಸರಳಿಕರ, ಶಿವಮೊಗ್ಗ ಪಶುವೈದ್ಯಕಿಯ ಮಹಾವಿದ್ಯಾಲಯ ಪ್ರಾದ್ಯಾಪಕ ಡಾ. ಎನ್.ಬಿ. ಶ್ರೀಧರ, ಹ್ಯೂಮೇನ್ ವರ್ಲ್ಡ ಫಾರ್ ಇಂಡಿಯಾ ಫೌಂಡೇಶನ್ ಹಿರಿಯ ತಜ್ಞ ರಮೇಶ ಭಜಂತ್ರಿ, ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಶರಣಬಸಪ್ಪ ರೋಣ ಇತರರಿದ್ದರು.

Leave a Reply

Your email address will not be published. Required fields are marked *