1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು.
ಕೊಪ್ಪಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ ಹಾಗೂ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ”ದ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಹಾಗೂ ಮಕ್ಕಳಿಗೆ ಜಂತುನಿವಾರಕ ಮಾತ್ರೆಯನ್ನು ವಿತರಣೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಲ್ಬೆಂಡಾಜೋಲ್ ಮಾತ್ರೆಯನ್ನು 1 ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತದೆ. ಮಕ್ಕಳಿಗೆ ಜಂತುನಿವಾರಕ ಮಾತ್ರೆ ಕೊಡುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸುತ್ತದೆ. ಪೌಷ್ಠಿಕಾಂಶ ಹೀರುವಿಕೆಯನ್ನು ಸುಧಾರಿಸುತ್ತದೆ. ಇದಲ್ಲದೇ ಅವರಲ್ಲಿ ಏಕಾಗ್ರತೆ, ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯನ್ನು ಸುಧಾರಿಸಲು ಸಹ ನೆರವಾಗುತ್ತದೆ. ಪರಿಸರದಲ್ಲಿ ಜಂತುಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಅಲ್ಬೆಂಡಾಜೋಲ್ ಮಾತ್ರೆಯನ್ನು ತಪ್ಪದೇ ಸೇವಿಸಬೇಕೆಂದು ತಿಳಿಸಿದರು.
ವರ್ಷದಲ್ಲಿ 2 ಬಾರಿಯಂತೆ 6 ತಿಂಗಳಿಗೊಮ್ಮೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ವಸತಿಶಾಲೆ, ಬಾಲಮಂದಿರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಜಂತುನಿವಾರಕ ಮಾತ್ರೆಯಿಂದ ಯಾವುದೇ ಅರ್ಹ ಮಕ್ಕಳು ಹೊರಗುಳಿಯದಂತೆ ನೋಡಿಕೊಳ್ಳಲಾಗುತ್ತದೆ. 19 ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಮಾತ್ರೆ ಸೇವಿಸಬೇಕು ಮತ್ತು ಪಾಲಕರು ತಮ್ಮ ಮಕ್ಕಳಿಗೆ ಅಲ್ಬೆಂಡಾಜೋಲ್ ಮಾತ್ರೆಯಿಂದ ನೀಡಿ, ಜಂತು ರಹಿತ ಪರಿಸರ ನಿರ್ಮಾಣ ಮಾಡಬೇಕೆಂದು ಹೇಳಿದರು.
ಜಿಲಾ ಆರ್.ಸಿ.ಹೆಚ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಪ್ರಕಾಶ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಪ್ರತಿಯೊಬ್ಬರು ವೈಯಕ್ತಿಕ ಸ್ವಚ್ಛತೆ ಕಾಪಾಡಬೇಕು. ಊಟ ಮಾಡುವ ಮೊದಲು, ಶೌಚಾಲಯಕ್ಕೆ ಹೋಗಿ ಬಂದ ನಂತರ ಕಡ್ಡಾಯವಾಗಿ ಸೋಪು ಬಳಸಿ ಕೈತೊಳೆಯುವ ವಿಧಾನದ ಕುರಿತು ಕಾರ್ಯಕ್ರಮದ ಗುರಿ ಮತ್ತು ಉದ್ದೇಶ ಕುರಿತು ವಿವರವಾಗಿ ತಿಳಿಸಿದರು.
ಲಿಂಗದಹಳ್ಳಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರಾದ ದ್ಯಾಮಣ್ಣ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಲು ಈ ಕಾರ್ಯಕ್ರಮ ಬಹಳಷ್ಟು ಉಪಯೋಗವಾಗಿದೆ. “ಜಂತು ರಹಿತ ಮಕ್ಕಳು ದೇಶದ ಸಂಪತ್ತು” ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಆಡಳಿತ ವೈದ್ಯಾಧಿಕಾರಿ ಡಾ. ಕರಿಯಮ್ಮ, ಉಪಪ್ರಾಂಶುಪಾಲರಾದ ಪ್ರಮೋದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಹಿ.ಆ.ಪ್ರಾ.ಆ. ಸುರಕ್ಷಾಧಿಕಾರಿ ವಂದನಾ, ತಾಲೂಕಾ ಆಶಾ ಮೇಲ್ವಿಚಾರಕಿ ಸಂದ್ಯಾ, ಆರ್.ಕೆ.ಎಸ್.ಕೆ ಜಿಲ್ಲಾ ಸಂಯೋಜಕ ಮೆಹಬೂಬ್, ವಸತಿ ನಿಲಯದ ವಾರ್ಡ್ ನಾಗರಾಜ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿಯ ಮೇಲ್ವಿಚಾರಕ ವರ್ಗದವರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೇವರಾಜ ಮೇಟಿ ಅವರು ಕಾರ್ಯಕ್ರಮ ನಿರೂಪಿಸಿದರು.

