ಕೋಡೇಕಲ್: ಹಗರಟಗಿ ಉಪಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಶ್ರೀ ಮುಜಾಹಿದ ನಮಾಜಕಟ್ಟಿ ಅವರು ಜಂತುಗಳ ನಿರ್ವಹಣಾ (ಡಿ-ವರ್ಮಿಂಗ್) ಕಾರ್ಯಕ್ರಮದ (10 ರಿಂದ 16 ಫೆ.) ಅಂಗವಾಗಿ ಸ್ಥಳೀಯ ಬೂದಿಹಾಳ ಸ.ಹಿ.ಮಾ.ಪ್ರಾ.ಶಾಲೆಯ ಮಕ್ಕಳಿಗೆ ಅಲ್ಬೆಂಡೋಸಲ್ ಮಾತ್ರೆಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ವೇಳೆ ಅವರು ವಿದ್ಯಾರ್ಥಿಗಳಿಗೆ ಜಂತುಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿ, ಸ್ವಚ್ಛತೆ ಪಾಲನೆಯ ಮಹತ್ವವನ್ನು ವಿವರಿಸಿದರು. ಅಶುದ್ಧ ಆಹಾರ ಸೇವನೆ, ಕೈ ತೊಳೆಯದಿರುವುದು ಮತ್ತು ಅಸ್ವಚ್ಛ ಪರಿಸರದಿಂದ ಜಂತು ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಸಿ, ನಿಯಮಿತವಾಗಿ ಕೈ ತೊಳೆಯುವುದು, ಸ್ವಚ್ಛ ನೀರು ಕುಡಿಯುವುದು ಮತ್ತು ಶೌಚಾಲಯದ ಬಳಕೆ ಮಾಡುವುದು ಅತ್ಯಂತ ಮುಖ್ಯವೆಂದು ಹೇಳಿದರು.
ಅಲ್ಬೆಂಡ್ರೋಸಲ್ ಮಾತ್ರೆಗಳನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಂತೆ ಮಕ್ಕಳಿಗೆ ನೀಡಲಾಯಿತು. ಮುಖ್ಯ ಗುರುಗಳಾದ ಶ್ರೀ ರವಿಕುಮಾರ ದೇಸಾಯಿ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಬಸ್ಸಮ್ಮ ಹಾಗೂ ಶಿಕ್ಷಕರು ಮತ್ತು ಆರೋಗ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು.
ಈ ಕಾರ್ಯಕ್ರಮವು ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಉತ್ತಮ ಪೌಷ್ಠಿಕ ಸ್ಥಿತಿಗಾಗಿ ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆಯಾಗಿದ್ದು, ಪೋಷಕರು ಸಹ ಈ ಕುರಿತು ಜಾಗೃತರಾಗಿರಬೇಕು ಹಾಗೂ 1 ರಿಂದ 19 ವರ್ಷದವರೆಲ್ಲರೂ ಈ ಮಾತ್ರೆಯನ್ನು ಸೇವಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದರು.

