ಮುದ್ದೇಬಿಹಾಳ: – ತಾಲೂಕಿನ ಢವಳಗಿ ಗ್ರಾಮದ ಮಡಿಕೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಸ್ಫೂರ್ತಿ ಆಂಗ್ಲ ಮಾಧ್ಯಮ ಎಲ್.ಪಿ.ಎಸ್. ಶಾಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ವಸತಿ ಶಾಲೆಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣ) ಒತ್ತಾಯಿಸಿದೆ.
ಈ ಸಂಬಂಧ ಇಂದು ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಗೆ ತೆರಳಿದ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ, ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ–1983ರ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ಇಲ್ಲದೆ ವಸತಿ ಕೇಂದ್ರ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.
ಸಂಘಟನೆಯ ಪ್ರಕಾರ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯಾರ್ಥಿಗಳ ಸುರಕ್ಷತಾ ನಿಯಮಗಳ ಉಲ್ಲಂಘನೆ ಹಾಗೂ ಅಧಿಕ ಶುಲ್ಕ ವಸೂಲಿ ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿರುವುದು ಕಂಡುಬಂದಿದೆ. ಶಿಕ್ಷಣ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡದ ಜಾಗದಲ್ಲಿ ಶಾಲೆ ನಡೆಸಲಾಗುತ್ತಿದೆ ಎಂಬ ಆರೋಪವೂ ಮಾಡಲಾಗಿದೆ.
ಢವಳಗಿ ಗ್ರಾಮದ ವಿದ್ಯಾಸ್ಫೂರ್ತಿ ಆಂಗ್ಲ ಮಾಧ್ಯಮ ಎಲ್.ಪಿ.ಎಸ್. ಶಾಲೆಯಲ್ಲಿ ನಡೆಯುತ್ತಿರುವ ಅನಧಿಕೃತ ವಸತಿ ಕೇಂದ್ರವನ್ನು ತಕ್ಷಣ ಬಂದ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಧರಣಿ ಸತ್ಯಾಗ್ರಹದಲ್ಲಿ ಡಿ.ಎಸ್.ಎಸ್. ಜಿಲ್ಲಾಧ್ಯಕ್ಷ ಬಾಲಚಂದ್ರ ಎಚ್. ಹುಲ್ಲೂರ, ಮಹಿಳಾ ಘಟಕದ ಜಿಲ್ಲಾ ಆದ್ಯಕ್ಷರಾದ ಗೀತಾ ಮಾದರ, ಬ ಬಾಗೇವಾಡಿ ಘಟಕದ ಅಧ್ಯಕ್ಷರಾದ ದುರಗಪ್ಪ ದೊಡಮನಿ , ಮುತ್ತಪ್ಪ ಪೂಜಾರಿ, ಶೇಖು ಆಲೂರ, ಶೇಖರ ಜಟ್ಟಗಿ,ಪರಸುರಾಮ ಹೊಲಮನಿ,ಸುರೇಶ ದೊಡಮನಿ,ಹನುಮಂತ ದೊಡಮನಿ, ಮುದುಕಪ್ಪ ದೊಂಕಮಡು, ಪ್ರಕಾಶ ಹಾದಿಮನಿ, ಬೀಮರಾವ ಹುಲ್ಲೂರ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

