ರಾಯಚೂರು ಫೆಬ್ರವರಿ 06 (ಕರ್ನಾಟಕ ವಾರ್ತೆ): ಶ್ವಾನಗಳು ಸೇರಿದಂತೆ ಎಲ್ಲ ಪ್ರಾಣಿಗಳ ಮೇಲೆ ದಯಾ ಭಾವ ಇರಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಫೆ.06ರ ಶುಕ್ರವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಆವರಣದಲ್ಲಿ ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ವಾನಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಣಿ ಹಿಂಸೆ ವಿರುದ್ಧ ಜಾಗೃತಿ ಮೂಡಿಸುವುದು, ಶ್ವಾನಗಳ ಆರೈಕೆ, ಆಹಾರ, ಲಸಿಕೆ ಮತ್ತು ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಯಚೂರು ಉತ್ಸವ ಅಂಗವಾಗಿ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಸೇರಿದಂತೆ ಹತ್ತಾರು ಕಾರ್ಯಕ್ರಮಗಳ ನೋಡುವ ಭಾಗ್ಯ ಜಿಲ್ಲೆಯ ಸಾರ್ವಜನಿಕರಿಗೆ ಸಿಕ್ಕಿದೆ. ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಉತ್ಸವದ ಯಶಸ್ವಿಗೆ ಪ್ರತಿಯೊಬ್ಬರು ಪಾತ್ರ ವಹಿಸಬೇಕು ಎಂದರು.
150 ಶ್ವಾನಗಳ ನೋಂದಣಿ: ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ವಾನ ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಸುಮಾರು 150ಕ್ಕೂ ಹೆಚ್ಚು ಶ್ವಾನಗಳ ನೋಂದಣಿ ಮಾಡಲಾಗಿತ್ತು. ಪುಡಲ್, ಚೌಚೌ, ಜರ್ಮನ್ ಶೇಫರ್ಡ್, ಗೋಲ್ಡನ್ ರೆಟ್ರಿವರ್, ಸೈಬೇರಿಯನ್ ಹಸ್ಕಿ, ಪಗ್, ಪಾಮೊರಾರಿಯನ್ , ದಾಬರ್ ಮ್ಯಾನ್, ಲ್ಯಾಬ್ರಾದರ್ ರೆಟ್ರಿವರ್, ಫ್ರೆಂಚ್ ಮಾಸ್ತಿಫ್, ಕ್ಯಾನ್ ಕಾರ್ಸೋ, ಡ್ಯಾಶ್ ಹೌಂಡ್, ಬಾಕ್ಸರ್, ಗ್ರೇಟ್ ಡೇನ್, ಪಿಟ್ ಬುಲ್ ಸೇರಿದಂತೆ ವಿವಿಧ ತಳಿಯ ಶ್ವಾನಗಳ ಪ್ರದರ್ಶನದಲ್ಲಿ ನಡೆಯಿತು.
ನಂತರ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ಲಸಿಕೆಯನ್ನು ಹಾಕಲಾಯಿತು.
ಇದೇ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ವಿಧಾನ ಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ, ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮ, ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಾದ ಡಾ.ಪೋಮ್ ಸಿಂಗ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಬಿ.ವೈ.ವಾಲ್ಮೀಕಿ, ಡಾ.ಶ್ರೀನಿವಾಸ, ಡಾ.ಶಶಿಧರ್, ಡಾ.ಅಮರೇಗೌಡ, ಡಾ. ಬಸವರಾಜ, ಡಾ.ಆನಂದ, ಡಾ.ಪ್ರಕಾಶ, ಡಾ.ಮಂಜುನಾಥ, ಡಾ.ಶ್ರೀಧರ್, ಡಾ. ಪ್ರಹ್ಲಾದ್, ಮುಖಂಡರಾದ ರವಿ ಭೋಸರಾಜು, ಕೆ.ಶಾಂತಪ್ಪ, ಜಯಂತರಾವ್ ಪತಂಗಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *