ಆರೂಢರ ಐಕ್ಯಸ್ಥಳ ತಾಲ್ಲೂಕಿನ ಆರೂಢನಂದಿಹಾಳದಲ್ಲಿ ಮಂಗಳವಾರ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ 44ನೇ ಜಾತ್ರಾ ಮಹೋತ್ಸವದ ರಥೋತ್ಸವ ಜರುಗಿತು.
ಜಾತ್ರಾ ದಿನದಂದು ಮಠದಿಂದ ಹಾಗೂ ಗ್ರಾಮದ ಗುರುನಗೌಡ ಪಾಟೀಲ, ಬಸಯ್ಯ ಹಿರೇಮಠ, ಶೇಖನಗೌಡ ಹಳ್ಳಿ, ವಾಲೀಕಾರ, ನಿಂಗಣ್ಣ ಮದರಿ ಅವರ ಮನೆಗಳಿಂದ ಕಳಸ, ಹಗ್ಗ, ಛತ್ರಿ ಛಾಮರಗಳನ್ನು ವಾದ್ಯ ವೈಭವಗಳೊಂದಿಗೆ ತರಲಾಯಿತು.
ಶ್ರೀಗುರು ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭೀಷೇಕದ ನಂತರ ಗಂಗಾಸ್ಥಳದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಡೊಳ್ಳಿನ ಮೇಳ, ವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ನಡೆಸಿ ಆರೂಢರು ಸಾಧನೆಗೈದ ಕೊಂಪಿಗೆ ಸಾಗಿ ಮಠಕ್ಕೆ ಆಗಮಿಸಿತು.

ಸಂಜೆ ಪುಣೆ, ಗೋವಾ, ಮೈಸೂರು, ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಯಾದಗಿರಿ,ಕಲಬುರ್ಗಿ, ಬಾಗಲಕೋಟೆ, ರಾಯಚೂರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಮಠದಿಂದ ಯಾಳವಾರ ರಸ್ತೆಯಲ್ಲಿರುವ ಪಾದಗಟ್ಟೆವರೆಗೆ ರಥ ಎಳೆದು ಭಕ್ತಿ ಸಮರ್ಪಿಸಿದರು.

ಭಕ್ತರು ಉತ್ತತ್ತಿ, ಪುಷ್ಪ ಹಾರಗಳನ್ನು ಸಮರ್ಪಿಸಿದರು. ರಥವನ್ನು ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮೀಜಿ ಹಾಗೂ ಪ್ರಚನಕಾರ ಮನುಜಗುಣ ಶಿವಪುತ್ರ ಶರಣರುಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಜಾತ್ರೆ ಕಮಿಟಿ ಅಧ್ಯಕ್ಷ ಎಸ್.ವಿ. ಕನ್ನೂರ, ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ ಇದ್ದರು.

Leave a Reply

Your email address will not be published. Required fields are marked *