ಉತ್ಸವಗಳು ನಾಡಿನ ಇತಿಹಾಸವನ್ನು ಮರುಕಳಿಸುತ್ತವೆ ನಮ್ಮ ದೇಶದ ಸಂಸ್ಕೃತಿ ನಮ್ಮ ದೇಶದ ಆಚಾರ ವಿಚಾರಗಳು , ಜೀವನ ಶೈಲಿ, ಸಾಹಿತ್ಯ, ಜಾನಪದ, ಹಳ್ಳಿಯ ಸೊಗಡು ಹೀಗೆ ಒಂದಲ್ಲ ಹಲವು ಕ್ಷೇತ್ರದಲ್ಲಿನ ಇತಿಹಾಸವನ್ನು ಮರುಕಳಿಸುವ ಕಾರ್ಯ ಉತ್ಸವಗಳಿಂದ ಆಗುತ್ತದೆ ಉತ್ಸವ ಮಾಡುವುದು ನಮಗೂ ಹೆಮ್ಮೆ ಇದೆ ಆದರೆ ಸಾರ್ವಜನಿಕರಿಗೆ ನೆಮ್ಮದಿಯ ಬದುಕು ಇಲ್ಲದಾಗ ಈ ಉತ್ಸವಗಳನ್ನು ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಅಳಲಾಗಿದೆ.

ಉತ್ಸವ ಎಂದರೆ ಹಬ್ಬ, ಸಂಭ್ರಮ, ಸಮಾರಂಭ ಎಂದು ಹಾಗೆಯೇ ಧಾರ್ಮಿಕ,ಸಾಂಸ್ಕೃತಿಕ ಸಮಾರಂಭಗಳೂ ಎಂತಲು ಕರೆಯಲಾಗುತ್ತದೆ ಆದರೆ ನಮ್ಮ ಹಳ್ಳಿಯ ಸೊಗಡಿನಲ್ಲಿ ಹೇಳುವುದಾದರೆ ಉತ್ಸವಗಳು ಎಂದರೆ ಅದೊಂದು ರೀತಿಯ ,ಖುಷಿ ಮತ್ತು ಸಂತೋಷ ಆದರೆ ಈ ಖುಷಿ, ಸಂತೋಷಗಳು, ಇದ್ದಾಗ ಮಾತ್ರ ಇಂತಹ ಉತ್ಸವಗಳನ್ನು ಆಚರಣೆ ಮಾಡಿದರೆ ನಾವು ಸಂಪೂರ್ಣವಾಗಿ ಖುಷಿಯನ್ನು ಅನುಭವಿಸಲು ಸಾಧ್ಯ ಆದರೆ ಇದು ಸಂದರ್ಭ ಅಲ್ಲ ರೈತನಿಗೆ ಎರಡನೇ ಬೆಳೆಗೆ ನೀರಿಲ್ಲ ಮೊದಲ ಬೆಳೆದ ಬೆಳೆಗೆ ಬೆಳೆಯು ಇಲ್ಲ ಇಂತಹ ಪರಿಸ್ಥಿತಿಯಲ್ಲಿ ರೈತ ಕಂಗಾಲಾಗಿ ಬೆಂಗಳೂರು, ಬಾಂಬೆ, ಪುನಾ,ಎಂದು ಗುಳೆ ಹೊರಟಿದ್ದಾರೆ ಇಂತಹ ಸಂದರ್ಭದಲ್ಲಿ ನಮಗ್ಯಾಕಪ್ಪ ಉತ್ಸವ ಎಂದು ರೈತರು, ಜನಸಾಮಾನ್ಯರು ,ಬಡವರು, ನಿರುದ್ಯೋಗಿಗಳು, ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಹೌದು ರೈತ ಈ ದೇಶದ ಬೆನ್ನೆಲುಬು, ರೈತ ಈ ದೇಶದ ಕಣ್ಣು, ರೈತ ಸುಖವಾಗಿದ್ದರೆ ನಾವೆಲ್ಲ ಸುಖವಾಗಿರುತ್ತವೆ ಎಂಬ ಬಿಂಕದ ಭಾಷಣಗಳು ನಿಜ ಜೀವನದಲ್ಲಿ ಅಳವಡಿಕೆಯಾಗುತ್ತಿಲ್ಲ. ರೈತನಿಗೆ ಸುಮಾರು ಎರಡು ಮೂರು ಬೆಳೆಗಳಾದವು ತುಂಬಾ ನಷ್ಟವನ್ನು ಅನುಭವಿಸುತ್ತಿದ್ದಾನೆ, ಸರಿಯಾದ ಇಳುವರಿಯೇ ಇಲ್ಲ ಬಂದ ಇಳುವರಿಗೆ ಬೆಲೆಯೂ ಇಲ್ಲ ಆದರೆ ರಸಾಯನಿಕ ಗೊಬ್ಬರಗಳ ಬೆಲೆ ಗಗನಕ್ಕೇರಿವೆ ಮೊದಲ ಬೆಳೆ ಬೆಳೆಯುವಾಗ ರೈತನಿಗೆ ಎಷ್ಟೆಲ್ಲಾ ತೊಂದರೆಗಳು ಬಂದು ಸರಿಯಾದ ಇಳುವರಿ ಬರಲಿಲ್ಲ ಬಂದ ಇಳುವರಿಗೆ ಬೆಲೆಯೂ ಇಲ್ಲ ಹಾಗಾಗಿ ರೈತ ಬೆಳೆಗಳನ್ನು ಬೆಳೆಯಲಿಕ್ಕೆ ಮಾಡಿದ ಸಾಲವನ್ನು ತೀರಿಸಲಾಗದೆ ಕಣ್ಣೀರಿಂದ ಕೈ ತೊಳೆದು “ಬಂದ ದಾರಿಗೆ ಸುಂಕವಿಲ್ಲ”ಎಂದು ಹೊಲಗದ್ದೆಗಳನ್ನು ಬಿಟ್ಟು ಬೆಂಗಳೂರು, ಬಾಂಬೆ, ಪುನಾ ಗುಳೆ ಹೊರಟಿದ್ದಾನೆ ಬೆಳೆ ಬೆಳೆಯಲಿಕ್ಕೆ ಮಾಡಿದ ಸಾಲಕ್ಕೆ ಗುರಿಯಾಗಿ ಹೇಗಾದರೂ ಮಾಡಿ ಮಾಡಿದ ಸಾಲ ಮುಟ್ಟಿಸಬೇಕೆಂದು ಕುಟುಂಬವನ್ನೇ ತೊರೆದು ಸಣ್ಣ ಸಣ್ಣ ಮಕ್ಕಳನ್ನು , ವೃದ್ಧರನ್ನು ಮನೆಯಲ್ಲಿ ಬಿಟ್ಟು ದುಃಖದಿಂದ ದುಡಿಯಲಿಕ್ಕೆ ಹೋಗುತ್ತಿದ್ದಾನೆ. ಮನೆಯಲ್ಲಿರುವ ಮಕ್ಕಳ ಗೋಳು ಕೇಳುವವರಾರು ? ಮನೆಯಲ್ಲಿರುವ ವೃದ್ಧರ ಗೋಳು ಕೇಳುವವರಾರು ? ಇಂತಹ ಪರಿಸ್ಥಿತಿಯಲ್ಲಿ ಉತ್ಸವಗಳು ನಮಗ್ಯಾಕೆ ಬೇಕು ಎಂದು ರೈತ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾನೆ.

ಈ ರೀತಿಯ ರೈತನ, ಬಡವನ ಪರಿಸ್ಥಿತಿಯನ್ನು ಕಂಡು ಕಾಣದಂತೆ ಉತ್ಸವಗಳನ್ನು ಆಚರಿಸುವುದು ಎಷ್ಟು ಸರಿ ? ಇದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ನಷ್ಟವನ್ನು ಅನುಭವಿಸಿದ ರೈತರ ಖಾತೆಗೆ ಇಂತಿಷ್ಟು ಹಣ ಹಾಕಿದ್ದರೆ ಅವರ ಜೀವನವು ಸ್ವಲ್ಪ ನೆಮ್ಮದಿಯಾಗಿರುತ್ತಿತ್ತು ಆಗ ರೈತನಿಗೆ ಖುಷಿ ,ಸಂತೋಷ, ಸಿಗುತ್ತಿತ್ತು ಆಗ ಅದುವೇ ಹಬ್ಬ ,ಉತ್ಸವವಾಗಲು ಸಾಧ್ಯವಾದೀತು ಆ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡುವ ಅವಶ್ಯಕತೆ ಇತ್ತು ಹಸಿದವನಿಗೆ ಅನ್ನ ನೀಡದೆ ಉತ್ಸವಗಳನ್ನು ಮಾಡಿದರೆ ಉತ್ಸವದ ಉತ್ಸಾಹ ಜನರಲ್ಲಿ ಬಂದೀತೆ ಎಂಬುದನ್ನು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಹಾಗೆಯೇ ನಿರುದ್ಯೋಗ, ಬಡತನ ಮತ್ತು ರೈತನ ಸಮಸ್ಯೆಗಳನ್ನು ಹೋಗಲಾಡಿಸಲು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗವನ್ನಾದರೂ ಕೊಟ್ಟು ಇವರೆಲ್ಲರ ಜೀವನದಲ್ಲಿ ಸ್ವಲ್ಪ ನೆಮ್ಮದಿ ಕೊಡಬಹುದಿತ್ತು ಆಗ ಅದು ಖುಷಿ, ಸಂತೋಷ, ಉತ್ಸವ ವಾಗಲು ಸಾಧ್ಯವಾಗುತ್ತಿತ್ತು ಸಾರ್ವಜನಿಕರು ನೆಮ್ಮದಿಯಾಗಿದ್ದರೆ ಅದಕ್ಕಿಂತ ಉತ್ಸವ ಬೇರೊಂದಿಲ್ಲ “ಹೊಟ್ಟೆಗೆ ಹಿಟ್ಟಿಲ್ಲದೆ ಜುಟ್ಟಿಗೆ ಮಲ್ಲಿಗೆ ಯಾತಕ್ಕೆ” ಎನ್ನುವಂತಾಯಿತು ಪರಿಸ್ಥಿತಿ.

ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸಾರ್ವಜನಿಕರ ಅಳಲನ್ನು ಅರ್ಥೈಸಿಕೊಂಡು ಸಾರ್ವಜನಿಕರ ಹಿತಾಸಕ್ತಿಗೆ ತಕ್ಕಂತೆ ಅವರು ಸುಖ ಶಾಂತಿ ನೆಮ್ಮದಿಯಿಂದ ಇರಲು ಉತ್ತಮ ಯೋಜನೆಗಳನ್ನು ಜಾರಿಗೆ ತಂದರೆ ಆಗ ಅದು ಹಬ್ಬವಾಗಿ,ಹಬ್ಬವು ಉತ್ಸವವಾಗಲು ಸಾಧ್ಯವಾದೀತು ಎಂಬುದನ್ನು ಮನದಲ್ಲಿಟ್ಟುಕೊಂಡು ಕಾರ್ಯಗಳನ್ನು ನಿರ್ವಹಿಸಿದರೆ ಅದಕ್ಕಿಂತ ಬೇರೊಂದು ಉತ್ಸವವಿಲ್ಲ ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿ.

ಸುಭಾಸ ಹರ್ವಾಪೂರ ಪತ್ರಕರ್ತರು ಸಿಂಧನೂರು.

Leave a Reply

Your email address will not be published. Required fields are marked *