ಸಿಂಧನೂರು : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ನೀಟ್ ಮರುಪರೀಕ್ಷೆ (ರಿಪೀಟ್ ನೀಟ್) ನಡೆಸಿರುವುದನ್ನು ಖಂಡಿಸಿ, ಹಗರಣದ ಬಗ್ಗೆ ಪಾರದರ್ಶಕ ಹಾಗೂ ಕಾಲಮಿತಿಯೊಳಗಿನ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಐಒ ವತಿಯಿಂದ ನಗರದಲ್ಲಿ ಸಿ ಎಂ ಸಿ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.ದೇಶದಾದ್ಯಂತ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು, ಪರೀಕ್ಷೆಗೆ ಮುಂಚಿತವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪಗಳು ಹಾಗೂ ಮರುಪರೀಕ್ಷೆ ನಡೆಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸಿದೆ. ಇದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮತ್ತು ಕೇಂದ್ರ ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಜಮಾಅತೆ ಇಸ್ಲಾಮಿ ಹಿಂದ್ ನಗರ ಘಟಕದ ಅಧ್ಯಕ್ಷ ಟಿ. ಹುಸೇನ್ ಸಾಬ್ ಮಾತನಾಡಿ, “ನೀಟ್ ಮರುಪರೀಕ್ಷೆಯ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ವರ್ಷಪೂರ್ತಿ ಶ್ರಮಪಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ,” ಎಂದು ಹೇಳಿದರು ಹಾಗೂ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಹಲವು ವರ್ಷಗಳ ಶ್ರಮ, ತ್ಯಾಗ ಮತ್ತು ಭವಿಷ್ಯದ ಕನಸಾಗಿದೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ, ಅಸಮರ್ಪಕ ಪರೀಕ್ಷಾ ನಿರ್ವಹಣೆ ಹಾಗೂ ಮರುಪರೀಕ್ಷೆಗಳಂತಹ ಬೆಳವಣಿಗೆಗಳು ವಿದ್ಯಾರ್ಥಿಗಳ ಮಾನಸಿಕ ಸ್ಥೈರ್ಯಕ್ಕೆ ಧಕ್ಕೆಯುಂಟು ಮಾಡುತ್ತಿವೆ.ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುವಂತೆ ಮಾಡಿರುವ ಈ ಘಟನೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿವೆ ಎಂದು ಎಸ್‌ಐಒ ಮುಖಂಡ ಜಿಶಾನ್ ಆರೋಪಿಸಿದರು. ಹಾಗೂ ಎಸ್.ಐ.ಒ ರಾಯಚೂರು ಜಿಲ್ಲಾಧ್ಯಕ್ಷ ಇಮ್ತಿಯಾಜ್ ಮಾತನಾಡಿ, “ವಿದ್ಯಾರ್ಥಿಗಳು 365 ದಿನ ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಓದಿರುತ್ತಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ದೇಶಾದ್ಯಂತ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತೆ ಪರೀಕ್ಷೆ ಬರೆಯಲು ಒತ್ತಾಯಿಸುವುದು ನ್ಯಾಯಸಮ್ಮತವಲ್ಲ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಹಾಗೂ ಅಸ್ವಸ್ಥತೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಿ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು. ಪ್ರಶ್ನೆಪತ್ರಿಕೆ ಲೀಕ್ ಮಾಡಿದ ಯಾವುದೇ ವ್ಯಕ್ತಿಯಾಗಲಿ ಅಥವಾ ಜಾಲವಾಗಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ತಕ್ಕ ಶಿಕ್ಷೆ ನೀಡಬೇಕು,” ಎಂದು ಆಗ್ರಹಿಸಿದರು.ಇದೇ ವೇಳೆ ನೀಟ್ ಪರೀಕ್ಷೆ ಬರೆದ ಜಿ.ಐ.ಒ ಘಟಕದ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮನಸ್ಥಿತಿಯನ್ನು ಹಂಚಿಕೊಂಡು ಮಾತನಾಡಿದರು. “ನಾವು ವರ್ಷಪೂರ್ತಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇವೆ. ಇದೀಗ ಮರುಪರೀಕ್ಷೆ ಎಂಬ ವಿಚಾರ ಕೇಳಿ ತುಂಬಾ ಆತಂಕ ಮತ್ತು ಭಯ ಉಂಟಾಗಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ನ್ಯಾಯ ದೊರಕಬೇಕು. ಸರ್ಕಾರ ನಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕು,” ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. ಕೇಂದ್ರೀಕೃತ ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಎನ್‌ಟಿಎ ಪದೇ ಪದೇ ವಿಫಲವಾಗುತ್ತಿರುವುದು ಪ್ರಸ್ತುತ ಪರೀಕ್ಷಾ ವ್ಯವಸ್ಥೆಯ ದೋಷಗಳನ್ನು ತೋರಿಸುತ್ತದೆ. ಆದ್ದರಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಹಾಗೂ ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಹೊಣೆಗಾರಿಕೆಯುತವಾಗಿಸಬೇಕು ಎಂದು ವಿದ್ಯಾರ್ಥಿ ಮುಖಂಡರು ಒತ್ತಾಯಿಸಿದರು.ಕೇಂದ್ರ ಶಿಕ್ಷಣ ಸಚಿವರು ಈ ವೈಫಲ್ಯದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳು ಮತ್ತು ಜಾಲಗಳ ವಿರುದ್ಧ ಪಾರದರ್ಶಕ ಹಾಗೂ ಕಾಲಮಿತಿಯ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ದೃಢ ಕ್ರಮ ಕೈಗೊಳ್ಳಬೇಕು ಎಂಬ ಹಕ್ಕೊತ್ತಾಯದ ಮನವಿಪತ್ರವನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಂ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ ಹುಸೇಬ್‌ಸಾಬ್, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಬುಲೈಸ್ , ಇರ್ಷಾದ್ ಕೆ,ಮುಖಂಡ ಜಾಂದ್‌ಪಾಷಾ ಜಾಗೀರದಾರ,ಸಾಮಾಜಿಕ ಹೋರಾಟಗಾರ ಜಿಶಾನ್ ಮಾನ್ವಿ, ಎಸ್‌ಐಒ ಜಿಲ್ಲಾ ಘಟಕದ ಅಧ್ಯಕ್ಷ ಇಮ್ತಿಯಾಜ್, ಎಸ್. ಐ. ಒ ತಾಲ್ಲೂಕು ಘಟಕದ ಅಧ್ಯಕ್ಷ ಅಫ್ಜಲ್ ಹುಸೇನ್, ಸದಸ್ಯ , ಸೇರಿದಂತೆ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಎಸ್‌ಐಒ, ಜಿಐಒ ಘಟಕದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




