ಪರೀಕ್ಷೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶ — ಹಿಜಾಬ್, ಜನಿವಾರ, ಶಿವದಾರ ಧರಿಸಲು ಸರ್ಕಾರ ಅನುಮತಿ
ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ: ಶಿಕ್ಷಣ ಇಲಾಖೆಯ ಮಹತ್ವದ ತೀರ್ಮಾನ
ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಧಾರ್ಮಿಕ ಪದ್ಧತಿಗಳ ಪಾಲನೆ ವಿಚಾರಕ್ಕೆ ರಾಜ್ಯ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಂಪ್ರದಾಯದಂತೆ ಜನಿವಾರ, ಶಿವದಾರ, ಪೇಟಾ, ಹಿಜಾಬ್ ಹಾಗೂ ಸ್ಕಾರ್ಫ್ ಸೇರಿದಂತೆ ಧಾರ್ಮಿಕ ಗುರುತುಗಳನ್ನು ಧರಿಸಲು ಅವಕಾಶ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವರು ಈ ಘೋಷಣೆ ಮಾಡಿದರು. ಮಕ್ಕಳ ಹಿತದೃಷ್ಟಿ ಹಾಗೂ ಅವರ ಕಲಿಕೆಯಲ್ಲಿ ಯಾವುದೇ ಮಾನಸಿಕ ಒತ್ತಡ ಉಂಟಾಗಬಾರದು ಎಂಬ ಉದ್ದೇಶದಿಂದ ಪಕ್ಷಾತೀತವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.ಇತ್ತೀಚೆಗೆ ಶಾಲೆಯೊಂದರಲ್ಲಿ ಜನಿವಾರ ಕತ್ತರಿಸಿದ ಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚರ್ಚೆ ಉಂಟಾಗಿದ್ದುದರಿಂದ ಸರ್ಕಾರ ಎಚ್ಚೆತ್ತುಕೊಂಡು ಈ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ದೊರೆತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ NEET ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ ಮಧು ಬಂಗಾರಪ್ಪ, ನೀಟ್ ಪರೀಕ್ಷೆಯ ವ್ಯವಸ್ಥಾಪನಾ ಸಮಸ್ಯೆಗಳ ಪರಿಣಾಮ ದೇಶದ ಸುಮಾರು 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತವಾಗುತ್ತಿದೆ ಎಂದು ಹೇಳಿದರು. ನಮ್ಮ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೂ ಇದು ಪರಿಣಾಮ ಬೀರುತ್ತಿರುವುದು ಗಂಭೀರ ವಿಚಾರವಾಗಿದೆ ಎಂದರು.
ಶಿಕ್ಷಣ ಕಾಯ್ದೆಯಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ಅನಗತ್ಯ ನಿಯಮಗಳು ಅಥವಾ ಒತ್ತಡ ಹೇರಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಶೈಕ್ಷಣಿಕ ನೀತಿ ಜಾರಿಗೊಳಿಸಲಾಗುತ್ತಿದೆ. ಶಾಲೆಗೆ ಹೋಗುವ ಮಕ್ಕಳು ತಮ್ಮ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಹಕ್ಕುಗಳನ್ನು ಗೌರವಯುತವಾಗಿ ಪಾಲಿಸುವಂತೆ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
