ಕೊಪ್ಪಳ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಡಾ. ನಾಗಲಕ್ಷ್ಮಿ ಚೌದ್ರಿ ಅವರು ಮಹಿಳೆಯರ ಹಕ್ಕುಗಳು, ಭದ್ರತೆ, ಶಿಕ್ಷಣ ಹಾಗೂ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾಳೆ ಕೊಪ್ಪಳ ಜಿಲ್ಲೆಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ.
ಪ್ರವಾಸ ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:
ಬೆಳಗ್ಗೆ 6:30ಕ್ಕೆ ಕೊಪ್ಪಳ ನಗರಕ್ಕೆ ಆಗಮಿಸುವರು. ಬೆಳಗ್ಗೆ 10:30ಕ್ಕೆ ಜಿಲ್ಲಾ ಆಡಳಿತ ಭವನದಲ್ಲಿ ಪಿಯು ಕಾಲೇಜು ಬಾಲಕಿಯರು ಹಾಗೂ ಪದವಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು, ಮಹಿಳಾ ಹಕ್ಕುಗಳು, ಭದ್ರತೆ ಮತ್ತು ಸ್ವಾವಲಂಬನೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ನಂತರ ಬೆಳಗ್ಗೆ 11:00ಕ್ಕೆ ಕೊಪ್ಪಳದಿಂದ ಪ್ರಯಾಣ ಬೆಳೆಸಿ ಮಧ್ಯಾಹ್ನ 12:45ಕ್ಕೆ ಕಾರಟಗಿಗೆ ಆಗಮಿಸುವರು. ಕಾರಟಗಿ ತಾಲೂಕಿನ ಉಳಿಗನೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮೀಣ ಮಹಿಳೆಯರ ಸಮಸ್ಯೆಗಳು, ಸವಾಲುಗಳು ಹಾಗೂ ಅಗತ್ಯಗಳ ಕುರಿತು ಮಾಹಿತಿ ಸಂಗ್ರಹಿಸುವರು.
ಅನಂತರ ಕಾರಟಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯರಿಗೆ ಲಭ್ಯವಿರುವ ಆರೋಗ್ಯ ಸೇವೆಗಳು, ತಾಯಿ-ಮಗು ಆರೈಕೆ ಹಾಗೂ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಸಂಜೆ 4:30ಕ್ಕೆ ಕಾರಟಗಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹಿಳಾ ಸುರಕ್ಷತೆ, ದೌರ್ಜನ್ಯ ತಡೆ ಕ್ರಮಗಳು ಮತ್ತು ಮಹಿಳಾ ಸಹಾಯವಾಣಿ ಸೇವೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಂಜೆ 5:30ಕ್ಕೆ ಕಾರಟಗಿಯಿಂದ ಹೊರಡುವರು ಎಂದು ಪ್ರವಾಸ ಕಾರ್ಯಕ್ರಮ ತಿಳಿಸಿದೆ.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಶಿಕ್ಷಣ ಇಲಾಖೆ ಸಿಬ್ಬಂದಿ, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿರುವ ನಿರೀಕ್ಷೆಯಿದೆ.
ಜಿಲ್ಲೆಯ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಮಹಿಳಾ ಆಯೋಗದ ಕಚೇರಿ ಮನವಿ ಮಾಡಿದೆ.

