ಸಿಂಧನೂರು, ಫೆಬ್ರವರಿ 2:
ಕತೋಲಿಕ್ ಚರ್ಚ್‌ನಿಂದ ಪ್ರತಿವರ್ಷ ಆಚರಿಸಲಾಗುವ ಧಾರ್ಮಿಕ ಸೇವಕರ ದಿನ (ಅರ್ಪಿತ ಜೀವನ ದಿನ) ಇಂದು ಭಕ್ತಿಭಾವದಿಂದ ಆಚರಿಸಲಾಯಿತು. ಇದೇ ದಿನ ಪ್ರಭುವಿನ ಸಮರ್ಪಣೆ ಹಬ್ಬ (ಕ್ಯಾಂಡಲ್‌ಮಾಸ್) ಕೂಡ ಆಚರಿಸಲಾಗುತ್ತದೆ.
ಈ ದಿನದ ಮಹತ್ವವು ದೇವರಿಗೆ ಸಂಪೂರ್ಣವಾಗಿ ತಮ್ಮ ಜೀವನವನ್ನು ಅರ್ಪಿಸಿಕೊಂಡು ಸಮಾಜದ ಸೇವೆಯಲ್ಲಿ ನಿರತರಾಗಿರುವ ಯಾಜಕರು, ಧಾರ್ಮಿಕ ಸಹೋದರಿಯರು (ಸಿಸ್ಟರ್‌ಗಳು), ಧಾರ್ಮಿಕ ಸಹೋದರರು (ಬ್ರದರ್‌ಗಳು) ಹಾಗೂ ವಿವಿಧ ಧಾರ್ಮಿಕ ಸಂಘಟನೆಗಳ ಸದಸ್ಯರ ಸೇವೆ, ತ್ಯಾಗ ಮತ್ತು ನಿಷ್ಠೆಯನ್ನು ಗೌರವಿಸುವುದಾಗಿದೆ. ಜೊತೆಗೆ ಹೊಸ ಧಾರ್ಮಿಕ ವೃತ್ತಿಗಳಿಗೆ ಪ್ರಾರ್ಥಿಸುವ ಉದ್ದೇಶವೂ ಈ ದಿನದ ವಿಶೇಷತೆಯಾಗಿದೆ.
ಈ ದಿನದ ಪ್ರಯುಕ್ತವಾಗಿ ಹೋಲಿ ಫ್ಯಾಮಿಲಿ ಚರ್ಚ್ನಲ್ಲಿ ಬಲಿ ಪೂಜೆಯ ನಂತರ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ಕ್ರಿಸ್ತ ಯೇಸುವಿನ ಸೇವೆಯಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ, ಸೇವೆಯಲ್ಲಿ ಕ್ರಿಸ್ತನನ್ನು ಕಾಣುತ್ತಾ, ಧಾರ್ಮಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಕನ್ಯಾ ಸ್ತ್ರೀಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ಪುಟಾಣಿ ಮಕ್ಕಳು ಕನ್ಯಾ ಸ್ತ್ರೀಯರಿಗೆ ಶಾಲು ಹೊದಿಸಿ, ಹಾರ ಹಾಕಿ ಶುಭಾಶಯಗಳನ್ನು ಕೋರುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಅರ್ಥವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ವಿಚಾರಣೆ ಗುರುಗಳು ಹಾಗೂ ಸಿಂಧನೂರು ವಲಯದ ಶ್ರೇಷ್ಠ ಗುರುಗಳಾದ ಫಾದರ್ ಜ್ಞಾನಪ್ರಕಾಶ್, ಹೋಲಿ ಫ್ಯಾಮಿಲಿ ಚರ್ಚಿನ ಭಕ್ತಾದಿಗಳು ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತಂದರು.
ಈ ಸಂದರ್ಭದಲ್ಲಿಂದು ಧಾರ್ಮಿಕ ಸೇವಕರ ಸೇವೆಯು ಕ್ರಿಸ್ತನ ಬೆಳಕು, ಸೇವೆ ಮತ್ತು ತ್ಯಾಗ, ನಂಬಿಕೆ ಮತ್ತು ನಿಷ್ಠೆಯ ಪ್ರತೀಕವಾಗಿದ್ದು, ಅವರ ಜೀವನವು ಸಮಾಜಕ್ಕೆ ಪ್ರೇರಣೆಯಾಗಿದೆ ಎಂಬ ಸಂದೇಶವನ್ನು ನೀಡಲಾಯಿತು.

Leave a Reply

Your email address will not be published. Required fields are marked *