ಬೆಂಗಳೂರು: ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ 5 ವರ್ಷಗಳಷ್ಟು ಸಡಿಲಿಕೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ದೊರೆತಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು–1) ವತಿಯಿಂದ ದಿನಾಂಕ 29.01.2026ರಂದು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನೆನಿ 2025 ಪ್ರಕಟಿಸಲಾಗಿದೆ. ಹಿಂದಿನ ದಿನಾಂಕ 29.09.2025ರ ಆದೇಶದಲ್ಲಿ ನೀಡಿದ್ದ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಸರ್ಕಾರ ಹಿಂಪಡೆದು, ಅದರ ಬದಲಿಗೆ 5 ವರ್ಷಗಳ ಸಡಿಲಿಕೆಯನ್ನು ಘೋಷಿಸಿದೆ.
ಉದ್ಯೋಗಾಕಾಂಕ್ಷಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳಿಂದ ಬಂದ ಮನವಿಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಿಗೆ ಕೋವಿಡ್ ನಂತರದ ಅವಧಿಯಲ್ಲಿ ಉಂಟಾದ ವ್ಯತ್ಯಯ ಹಾಗೂ ನೇಮಕಾತಿ ವಿಳಂಬವನ್ನು ಗಮನದಲ್ಲಿಟ್ಟುಕೊಂಡು ಈ ಸಡಿಲಿಕೆ ನೀಡಲಾಗಿದೆ ಎನ್ನಲಾಗಿದೆ.
ಈ ಆದೇಶವು ಈ ದಿನಾಂಕದಿಂದ 31.12.2027ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡುವ ಎಲ್ಲಾ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಗೆ ಮಾತ್ರ ಈ 5 ವರ್ಷಗಳ ಸಡಿಲಿಕೆ ದೊರೆಯಲಿದೆ.
ರಾಜ್ಯಪಾಲರ ಆಜ್ಞಾನುಸಾರ ಈ ಆದೇಶವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಆಶಾಕುಮಾರಿ ಎ.ಜಿ ಹೊರಡಿಸಿದ್ದಾರೆ

Leave a Reply

Your email address will not be published. Required fields are marked *