ಬಳಗಾನೂರು ಪಟ್ಟಣದ ಜನಜೀವನಕ್ಕೆ ಇದೀಗ ಹೊಸ ಭೀತಿಯೊಂದು ಎದುರಾಗಿದೆ.

ಪಟ್ಟಣದಲ್ಲಿ ಬೃಹದಾಕಾರದ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹೊರಬರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶುಕ್ರವಾರ ಸಂಜೆ ಐದನೇ ವಾರ್ಡಿನ ಮನೆಯೊಂದಕ್ಕೆ ಕೋತಿಗಳ ಗುಂಪೊಂದು ಮುತ್ತಿಗೆ ಹಾಕಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮನೆಯೊಳಗಿದ್ದ ಮಕ್ಕಳು ಭಯದಿಂದ ಅಳಲಾರಂಭಿಸಿದ್ದು, ಕುಟುಂಬಸ್ಥರು ಕೋತಿಗಳ ದಾಳಿ ಭೀತಿಯಲ್ಲಿ ಸಿಲುಕಿದ್ದರು.

ಇನ್ನೊಂದೆಡೆ, ಆರನೇ ವಾರ್ಡಿನಲ್ಲಿ ಕೋತಿಯೊಂದು ಎತ್ತುಗಳಿಗೆ ಬೆನ್ನುಹತ್ತಿ ಕಡಿಯಲು ಹೋಗಿದ್ದ ಘಟನೆ ನಡೆದಿದೆ.

ಅದನ್ನು ಓಡಿಸಲು ಹೋದ ಎತ್ತುಗಳ ಮಾಲೀಕರ ಮೇಲೆಯೇ ಕೋತಿ ಹಾರಿ ಕಚ್ಚಲು ಮುಂದಾದ್ದರಿಂದ, ಆತ ಭಯಭೀತನಾಗಿ ಹೆಗಲಿಗೆ ಬಾರುಕೋಲು ಹಾಕಿಕೊಂಡೇ ಪಟ್ಟಣ ಪಂಚಾಯ್ತಿಗೆ ತೆರಳಿ ಮುಖ್ಯಾಧಿಕಾರಿಗಳಿಗೆ ದೂರು ನೀಡಿದ್ದಾನೆ.

ಸ್ಥಳೀಯರ ಹೇಳಿಕೆಯಂತೆ, ಕೋತಿಗಳನ್ನು ಓಡಿಸಲು ಹೋದರೆ ನೇರವಾಗಿ ಮೈಮೇಲೆ ಹಾರಿಬಿಡುತ್ತಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಭೀತಿ ಕಾಡುತ್ತಿದೆ.

ಒಂದು ಕಡೆ ಬೀದಿ ನಾಯಿಗಳ ಕಾಟ, ಮತ್ತೊಂದು ಕಡೆ ಕೋತಿಗಳ ಆರ್ಭಟ

ಎರಡು ಸಮಸ್ಯೆಗಳ ಮಧ್ಯೆ ಸಿಕ್ಕು ಬಳಗಾನೂರಿನ ನಾಗರೀಕರು ನಲುಗಿಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳು ಕೂಡಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ,

ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೋತಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅನಾಹುತಗಳಾಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹ ವ್ಯಕ್ತಪಡಿಸಿದ್ದಾರೆ.

ವರದಿ : ಸುರೇಶ್ ಬಳಗಾನೂರು

Leave a Reply

Your email address will not be published. Required fields are marked *