ಮಸ್ಕಿ: ತಾಲೂಕಿನ ಪಾಮನಕಲ್ಲೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ರೈತರ ಜಮೀನುಗಳಿಗೆ ತೆರಳುವ ರಸ್ತೆಯನ್ನು ಬಂದ್ ಮಾಡಿದ್ದರಿಂದ ರೈತರು ಕರ್ನಾಟಕ ರೈತ ಸಂಘದ ನೇತೃವದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿದರು.
ನಂತರ ಸಂತೋಷ ಹಿರೇದಿನ್ನಿ ಮಾತನಾಡಿ ಪಾಮನಕಲ್ಲೂರು ಗ್ರಾಮದ ಸ.ನಂ. 3ರ ಜಮೀನಿನ ಮಾಲೀಕ ಶಿವರಾಜ ಗೊಬ್ಬೇರ ಎಂಬುವವರು ರಸ್ತೆಯನ್ನು ಬಂದ್ ಮಾಡಿದ್ದರಿಂದ 30-40 ರೈತರಿಗೆ ಕೃಷಿ ಚಟುವಟಿಕೆ ನಡೆಸಲು ರಸ್ತೆ ಇಲ್ಲದಂತಾಗಿದೆ.
ಪಾಮನಕಲ್ಲೂರು-ಹಟ್ಟಿ ಮುಖ್ಯ ರಸ್ತೆಯ ಪಶ್ಚಿಮಕ್ಕೆ ಇವರ ಹೊಲ ಇರುತ್ತದೆ. ಮುಖ್ಯ ರಸ್ತೆಯಿಂದ ಸ.ನಂ. 172ರ ಮೂಲಕ ಶಿವರಾಜರವರ ಸ.ನಂ.3 ರಲ್ಲಿ ಹಾದಿಯಲ್ಲಿ ರೈತರ ವಹಿವಾಡು ದಾರಿ ಇರುತ್ತದೆ. ಕಳೆದ ಕೆಲ ದಶಕಗಳಿಂದ ಈ ರಸ್ತೆಯ ಮೂಲಕ ರೈತರು ಓಡಾಡುತ್ತಿದ್ದರು. ಈ ರಸ್ತೆ ಬಿಟ್ಟರೆ ನಮ್ಮ 40 ಜನ ರೈತ ಕುಟುಂಗಳಿಗೆ ಬೇರೆ ರಸ್ತೆ ಇರುವುದಿಲ್ಲ. ಕಳೆದ ಒಂದು ವಾರದಿಂದ ಶಿವರಾಜ ದುರುಗಪ್ಪ ಗೊಬ್ಬೇರ ಈತನು ಈ ದಾರಿಯನ್ನು ಬಂದ್ ಮಾಡಿರುತ್ತಾನೆ. ದಾರಿಗೆ ಅಡ್ಡಲಾಗಿ ದೊಡ್ಡ ತೆಗ್ಗು ಗುಂಡಿಗಳನ್ನು ನಿರ್ಮಿಸಿದ್ದಾನೆ. ರಸ್ತೆ ಬೇಕಾದರೆ 40 ಜನ ರೈತರು ದುಡ್ಡು ಕೊಟ್ಟು ರಸ್ತೆ ಪಡೆಯಬೇಕೆಂದು ಬೇದರಿಕೆ ಹಾಕುತ್ತಿದ್ದಾನೆ. ಆದ್ದರಿಂದ ಕೂಡಲೇ ರೈತರು ಓಡಾಡಲು ರಸ್ತೆಯ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ಚಿಲ್ಕರಾಗಿ, ತಿರುಪತಿ ಮಸ್ಕಿ, ಮಾರುತಿ ಜಿನ್ನಾಪೂರ, ಚಂದಸಾಬ ಪಾಮನಕಲ್ಲೂರು, ಹೂವಪ್ಪ ಪಾಮನಕಲ್ಲೂರು ಸೇರಿದಂತೆ ಇನ್ನಿತರರಿದ್ದರು.

