ತಾಳಿಕೋಟಿ: ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಅದು ಎಲ್ಲ ದೇಶವಾಸಿಗಳ ಹಿತವನ್ನು ಬಯಸುತ್ತದೆ, ಜಾತಿ ವರ್ಗ ಹಾಗೂ ಧರ್ಮದ ಆಧಾರದಲ್ಲಿ ವ್ಯತ್ಯಾಸ ಮಾಡದೇ ನಾವೆಲ್ಲರೂ ಭಾರತೀಯರು ನಾವೆಲ್ಲ ಒಂದು ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ ಎಂದು ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಹೇಳಿದರು. ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ.ಬಿ ಆರ್ ಅಂಬೇಡ್ಕರ್ ಅವರು ನಮಗೆ ವಿಶ್ವ ಶ್ರೇಷ್ಠ ಸಂವಿಧಾನವನ್ನು ಕೊಟ್ಟು ಹೋಗಿದ್ದಾರೆ ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಸಂವಿಧಾನದಿಂದಲೇ ದೇಶ ಸದೃಢ ವಾಗಲು ಸಾಧ್ಯ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿದ ಮಹಾತ್ಮ ಗಾಂಧಿಯವರ ತ್ಯಾಗ ಬಲಿದಾನವನ್ನು ನಾವೆಂದೂ ಮರೆಯಬಾರದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ದುರ್ಬಲಗೊಳಿಸುವ ಕಾರ್ಯ ಮಾಡಬಾರದು. ಎಲ್ಲರೂ ಒಂದಾಗಿ ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ. ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದೆ ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ, ರಾಜ್ಯ ಹಾಗೂ ಕೇಂದ್ರದ ಸಮನ್ವಯತೆಯೊಂದಿಗೆ ದೇಶದ ಪ್ರಗತಿ ಸಾಧ್ಯ ಇದಕ್ಕೆ ಒಕ್ಕೂಟ ವ್ಯವಸ್ಥೆಯ ಪಾಲನೆ ಅಗತ್ಯವಾಗಿದೆ. ಇಡೀ ಮತಕ್ಷೇತ್ರ ಅಭಿವೃದ್ಧಿಯಡೆಗೆ ಹೋಗುತ್ತಿದೆ ಇದರಲ್ಲಿ ನಿಮ್ಮೆಲ್ಲರ ಸಹಕಾರವು ಇದೆ. ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡಕ್ಕೆ ಮಂಜೂರಾತಿ ಸಿಕ್ಕಿದೆ ಒಂದು ವರ್ಷದ ಒಳಗಾಗಿ ಇದರ ನಿರ್ಮಾಣ ಆಗಲು ತಾಲೂಕಾಡಳಿತ ಆಸಕ್ತಿ ವಹಿಸಬೇಕು ಅದರಂತೆ ನೂತನ ತಾಲೂಕಿನ ಎಲ್ಲಾ ಕಚೇರಿಗಳು ಆದಷ್ಟು ಬೇಗ ಆರಂಭಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲಾರು ಒಂದಾಗಿ ಕೆಲಸ ಮಾಡೋಣ ಎಂದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಾಲೂಕಾ ಡಳಿತದಿಂದ ಸನ್ಮಾನಿಸಲಾಯಿತು ಹಾಗೂ ಶಿಶು ಅಭಿವೃದ್ಧಿ ಇಲಾಖೆಯು ಅಂಗನವಾಡಿಯ ಎಲ್.ಕೆ.ಜಿ. ಮತ್ತು ಯುಕೆಜಿ ಮಕ್ಕಳಿಗೆ ಕೊಡಮಾಡಿದ ಸ್ಮಾರ್ಟ್ ಟಿವಿಗಳನ್ನು ಅಪ್ಪಾಜಿ ನಾಡಗೌಡರು ವಿತರಿಸಿದರು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಧ್ವಜಾರೋಹಣ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ತಾಪಂ ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಸಿಡಿಪಿಒ ಶಿವಮೂರ್ತಿ ಕುಂಬಾರ, ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ, ಗ್ಯಾರಂಟಿ ಸಮಿತಿಯ ಸಂಗಮೇಶ ದೇಸಾಯಿ, ಶಿರಸ್ತೆದಾರ ಜೈನಾಪೂರ, ಪಿಎಸ್ಐ ಜ್ಯೋತಿ ಖೋತ್, ಪಟ್ಟಣದ ಗಣ್ಯರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

