ದುಂದು ವೆಚ್ಚಕ್ಕೆ ಕಡಿವಾಣ – ಸಮಾಜಕ್ಕೆ ಸಂದೇಶ ನೀಡಿದ ಸಾಮೂಹಿಕ ವಿವಾಹ: ಯು.ಟಿ. ಖಾದರ್
ಮಾನ್ವಿ : ದೇಶಕ್ಕೆ ಶಾಂತಿ, ಸಹಬಾಳ್ವೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವದ ಸಂದೇಶವನ್ನು ನೀಡುವಂತಹ ಕಾರ್ಯಕ್ರಮಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಹೇಳಿದರು.
ಅವರು ಪಟ್ಟಣದ ಅಕ್ಬರಿ ಮಸ್ಜಿದ್ ಹಿಂದಿನ ಆವರಣದಲ್ಲಿ ದಾರುಸ್ಸಲಾಮ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮುಸ್ಲಿಂ ಸಮುದಾಯದ 111 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮದುವೆಯ ಹೆಸರಿನಲ್ಲಿ ದುಂದು ವೆಚ್ಚಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಸರಳತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅಳವಡಿಸಿಕೊಂಡು 111 ಜೋಡಿಗಳ ವಿವಾಹವನ್ನು ಒಂದೇ ವೇದಿಕೆಯಲ್ಲಿ ನಡೆಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ದಾರುಸ್ಸಲಾಮ್ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರು ತಮ್ಮ ಪುತ್ರನ ವಿವಾಹವನ್ನೂ ಸಹ ಸಾಮೂಹಿಕ ವಿವಾಹಗಳೊಂದಿಗೆ ಆಚರಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಸಮಾಜದಲ್ಲಿರುವ ಅನುಕೂಲಸ್ಥರು ಈ ರೀತಿಯ ಆದರ್ಶ ಕಾರ್ಯಕ್ರಮಗಳನ್ನು ಆಯೋಜಿಸಿದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಡ ಹಾಗೂ ನಿರ್ಗತಿಕ ಕುಟುಂಬಗಳು ಸಂತೋಷದ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು. ಸಾಮೂಹಿಕ ವಿವಾಹದಲ್ಲಿ ಜೀವನ ಆರಂಭಿಸುತ್ತಿರುವ ನವದಂಪತಿಗಳಿಗೆ ಶುಭಹಾರೈಸಿದರು.
ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಸಮಾಜದಲ್ಲಿ ನಿಜವಾದ ಬದಲಾವಣೆ ಹಣದಿಂದ ಮಾತ್ರ ಸಾಧ್ಯವಿಲ್ಲ, ಸಾಮಾಜಿಕ ಕಾರ್ಯಕ್ರಮಗಳ ಮೂಲಕವೇ ಬದಲಾವಣೆ ಸಾಧ್ಯ ಎಂದು ಹೇಳಿದರು. ಇಂತಹ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಿದರೆ ದುಂದು ವೆಚ್ಚದ ಮದುವೆಗಳಿಂದಾಗುವ ಆರ್ಥಿಕ ಹೊರೆಯನ್ನು ತಪ್ಪಿಸಬಹುದು. ಇದರಿಂದ ಬಡ ಕುಟುಂಬಗಳಿಗೆ ಬಹುಮುಖ್ಯ ನೆರವು ದೊರೆಯುತ್ತದೆ ಎಂದರು. ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪಡೆದು, ಸಾಮೂಹಿಕ ವಿವಾಹದಲ್ಲಿ ಜೋಡಿಯಾದ ದಂಪತಿಗಳು ಮಿತ ಸಂತಾನ ಹಾಗೂ ಆದರ್ಶ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ–ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಮಾತನಾಡಿ, ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರು ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಡವರಿಗೆ ಮಾಸಿಕ ನೆರವು, ಬಡ್ಡಿರಹಿತ ಸಾಲ, ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾಭ್ಯಾಸ, ಉಚಿತ ಆರೋಗ್ಯ ಶಿಬಿರಗಳು ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು. ಅಲ್ಪಸಂಖ್ಯಾತ ಸಮುದಾಯದ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ತಮ್ಮ ಶಾಸಕರ ಅವಧಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಈದ್ಗಾ ಶಾದಿ ಮಹಲ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಸರ್ಕಾರದಿಂದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಾರುಸ್ಸಲಾಮ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರು, ಮದುವೆಯ ಹೆಸರಿನಲ್ಲಿ ಅನಾವಶ್ಯಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಸೇವೆಯ ಕೆಲಸಗಳಿಗೆ ಯಾವಾಗಲೂ ತಾವು ಸಿದ್ಧರಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಮಿ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾದ ಮೌಲಾನಾ ವಲಿಯುಲ್ಲಾ ಸಯೀದಿ ಫಲಾಹಿ ವಹಿಸಿ, ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ದಾರುಸ್ಸಲಾಮ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಒಟ್ಟು 111 ಜೋಡಿ ಮುಸ್ಲಿಂ ಸಮುದಾಯದವರ ಉಚಿತ ಸಾಮೂಹಿಕ ವಿವಾಹ ನಡೆಯಿತು. ಈ ಸಾಮೂಹಿಕ ವಿವಾಹದಲ್ಲಿ ಉದ್ಯಮಿಗಳಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರ ಪುತ್ರ ಸೈಯದ್ ಆತಿಫ್ ಆದ್ನಾನ್ ಅವರ ವಿವಾಹವೂ ನೆರವೇರಿತು.
ಕಾರ್ಯಕ್ರಮದಲ್ಲಿ ಶಾಸಕ ಜಿ. ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ್, ಮಾಜಿ ಸಚಿವ ಶಿವನಗೌಡ ನಾಯಕ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರು ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ಬಸವನಗೌಡ ಬ್ಯಾಗವಾಟ್, ಪ್ರತಾಪಗೌಡ ಪಾಟೀಲ್, ರಾಜಶೇಖರ ನಾಯಕ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಮಾತನಾಡಿದರು.
ಇದಲ್ಲದೆ ಜಮಾತೆ ಇಸ್ಲಾಮಿ ಹಿಂದ್ ನ್ಯೂ ದೆಹಲಿಯ ಉಪಾಧ್ಯಕ್ಷ ಮೌಲಾನಾ ವಲಿಯುಲ್ಲಾ ಸಯೀದಿ ಫಲಾಹಿ, ರಾಜ್ಯ ಕಾರ್ಯದರ್ಶಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನದ ಅಧ್ಯಕ್ಷ ಜನಾಬ್ ಮಹಮ್ಮದ್ ಕುನ್ಹಿ, ಮುಸ್ಲಿಂ ಧರ್ಮಗುರುಗಳಾದ ಸೈಯದ್ ಸಜ್ಜದ್ ಮತವಾಲೆ, ಖಾಲಿದ್ ಗುರು, ಶೇಖ್ ಫರೀದ್ ಉಮ್ರಿ, ರವಿ ಬೋಸರಾಜು, ನಯೋಪ್ರ ತಾಲೂಕು ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಕೆ. ಅಂಬರೀಶಪ್ಪ ವಕೀಲರು, ತಿಮ್ಮರೆಡ್ಡಿ ಭೋಗವಾಟಿ, ಬಷೀರುದಿನ್, ಮಹಮ್ಮದ್ ಶಲಾಂ, ರಾಜಕ್ ಉಸ್ತಾದ್, ಶಾಂತಪ್ಪ, ಅಸ್ಲಂ ಪಾಷಾ ಸೇರಿದಂತೆ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




