ಸಿಂಧನೂರು : ಯಾವುದೇ ಸಾಹಿತ್ಯದಲ್ಲಿ ಸರ್ವೋದಯದ ಆಶಯಗಳು ಅಡಕವಾಗಿದ್ದರೆ ಅಂತಹ ಸಾಹಿತ್ಯ ಕಾಲಾತೀತವಾಗಿ ಗೆಲ್ಲುತ್ತದೆ ಎಂದು ಗಜಲ್ ಕವಿ ಡಾ. ಶರೀಫ್ ಹಸಮಕಲ್ ಹೇಳಿದರು. ಅವರು ಎಲ್.ಬಿ.ಕೆ & ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಸಾಹಿತಿ ಡಾ. ಮಲ್ಲಿಕಾರ್ಜುನ ಕಮತಗಿ ಅವರ “ಜವಾರಿ ಜರ್ನಿ” ಕೃತಿಯ ಕುರಿತು ಮಾತನಾಡಿದರು.
ಪಂಪನಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸರ್ವೋದಯದ ಕನಸು ಅನೇಕ ಕವಿಗಳ ಬರಹಗಳಲ್ಲಿ ವ್ಯಕ್ತವಾಗಿದೆ. ಇದೇ ಸಾಲಿನಲ್ಲಿ ಕಮತಗಿಯವರ ಜವಾರಿ ಜರ್ನಿ ಕೃತಿ ಸೇರಿದೆ. ಪ್ರಸ್ತುತ ಸಮಾಜದಲ್ಲಿ ಧರ್ಮ, ಜಾತಿ, ವರ್ಗ, ಆಹಾರ ಸಂಸ್ಕೃತಿಯ ಹೆಸರಿನಲ್ಲಿ ಕೋಮು ಸಂಘರ್ಷಗಳನ್ನು ಬಿತ್ತುವ ಪ್ರಯತ್ನಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, “ಪಾಕಿಸ್ತಾನದ ಕಾಗೆ ಭಾರತಕ್ಕೆ ಬಂತು” ಎಂಬ ಅನುಭವ ಕಥನದ ಮೂಲಕ ಗಡಿಗಳನ್ನು ಮೀರಿ ಮಾನವೀಯತೆಯ ಅಗತ್ಯತೆಯನ್ನು ಕವಿ ಅಭಿವ್ಯಕ್ತಿಸಿದ್ದಾರೆ ಎಂದರು.
ಕೃತಿಯ ಅಡಿಬರಹ “ಒಂದಿಷ್ಟು ನಗೆ – ಒಂದಿಷ್ಟು ನಗ್ನ” ಎಂಬುದು ಕೇವಲ ದೇಹದ ನಗ್ನತೆಯಲ್ಲ, ಮನಸ್ಸಿನ ಮೋಹವನ್ನು ಬಿಚ್ಚಿಡುವ ಸಂಕೇತವಾಗಿದೆ. ತಾಯಿ–ಮಗುವಿನ ಸಂಬಂಧ, ಜಾತಿ ಕಾರಣಕ್ಕೆ ತಿರಸ್ಕೃತಳಾದ ಹುಡುಗಿಯ ಕಥನದ ಮೂಲಕ ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಸಮಾಜದ ವೈರುಧ್ಯಗಳನ್ನು ಕವಿ ಮಾನವೀಯ ನೆಲೆಯಲ್ಲಿ ಚಿತ್ರಿಸಿದ್ದಾರೆ. 21 ಅನುಭವ ಕಥನಗಳಲ್ಲಿ ಬದುಕಿನ ನೋವು, ನಲಿವು, ಹಾಸ್ಯ ಮತ್ತು ಕಾರುಣ್ಯ ಒಂದೇ ಹೊಳಪಿನಲ್ಲಿ ಮೂಡಿಬಂದಿದೆ ಎಂದು ಅವರು ಪ್ರಶಂಸಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಸಿ.ಬಿ. ಚಿಲ್ಕರಾಗಿ, ಜವಾರಿ ಜರ್ನಿಗೆ ಬೆನ್ನುಡಿ ಬರೆದ ಅನುಭವ ಹರ್ಷ ತಂದಿದೆ ಎಂದರು. ಓದುವ ಜರ್ನಿ ಮತ್ತು ತಿಳಿಯುವ ಜರ್ನಿ ಎರಡೂ ಕೃತಿಯಲ್ಲಿ ಸಮರ್ಥವಾಗಿ ಮೂಡಿಬಂದಿವೆ ಎಂದು ಹೇಳಿದರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಡಾ. ಸಿದ್ದಯ್ಯ ಪುರಾಣಿ ಟ್ರಸ್ಟ್ ಅಧ್ಯಕ್ಷ ಅಜ್ಮೀರ್ ನಂದಾಪುರ ಮಾತನಾಡಿ, ಕಮತಗಿಯವರು ಪ್ರಾಮಾಣಿಕ ಮನಸ್ಸಿನಿಂದ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಕೃತಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದರೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಕಾರ ಫ್ಯಾಮಿಲಿ ಟ್ರಸ್ಟ್ ಪ್ರಕಾಶನದ ರಾಘವೇಂದ್ರ ಕೋಲಕಾರ ವಹಿಸಿ ಮಾತನಾಡಿ, ಓದುಗರು ಸ್ಥಳೀಯ ಸಾಹಿತಿಗಳ ಕೃತಿಗಳನ್ನು ಕೊಂಡು ಓದಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅಮರಾಪುರ, ಲೇಖಕರ ತಂದೆ ಹೊಳೆಯಪ್ಪ ಕಮತಗಿ, ಸುರಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಸೇರಿದಂತೆ ಹಲವಾರು ಸಾಹಿತಿಗಳು, ಪತ್ರಕರ್ತರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಅಕ್ಕಮಹಾದೇವಿ ಪ್ರಾರ್ಥಿಸಿದರು. ರಾಮಣ್ಣ ಹಿರೇಬೇರ್ಗಿ ಸ್ವಾಗತಿಸಿದರು. ಬಸವರಾಜ ಚಿಗರಿ ವಂದಿಸಿದರು. ಈಶ್ವರ ಹಾಲಿಗಿ ಕಾರ್ಯಕ್ರಮ ನಿರೂಪಿಸಿದರು.


