ಲಿಂಗಸಗೂರು: ನಗರದ ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಿ.ಫಾರ್ಮಸಿ ಕಾಲೇಜ್, ಬಿ.ಫಾರ್ಮಸಿ ಕಾಲೇಜ್, ಪ್ಯಾರಾಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜ್ ಹಾಗೂ ನ್ಯಾಚುರೋಪತಿ ಮೆಡಿಕಲ್ ಕಾಲೇಜ್, ಲಿಂಗಸಗೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು. ನಂತರ ಮಾತನಾಡಿದ ಕಾಲೇಜಿನ ಅಧ್ಯಕ್ಷರಾದ ಶ್ರೀ ಶಾಂತನಗೌಡ ಪಾಟೀಲ್ ಅವರು, ಸ್ವಾಮಿ ವಿವೇಕಾನಂದರು ಯುವಜನತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ಸೇವಾ ಮನೋಭಾವವನ್ನು ನೀಡಿದ ಮಹಾನ್ ಚಿಂತಕರಾಗಿದ್ದು, ಅವರ ಜೀವನ ಸಂದೇಶಗಳು ಇಂದಿನ ಯುವಕರಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ್ ಹೆಚ್ ಮಾತನಾಡಿ, ಸ್ವಾಮಿ ವಿವೇಕಾನಂದರ ಶಿಕ್ಷಣ ತತ್ವಗಳು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿವೆ. ಯುವಕರು ಕೇವಲ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಾಗದೇ ಮಾನವೀಯ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಮತ್ತು ರಾಷ್ಟ್ರಸೇವೆಯತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಮರೇಶ್ ಹಿರೇಮಠ , ಅವರು ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ಯುವಜನತೆಗೆ ನೀಡಿದ ಸಂದೇಶಗಳು ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ವಿವೇಕಾನಂದರ ವಚನಗಳನ್ನು ಪಠಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಗುಡುಸಾಬ, ಶ್ರೀ ಲಕ್ಷ್ಮೀ , ವಾಹಿದಾ, ವಿಜಯಕುಮಾರ್, ಮಹಾಂತೇಶ ,ಬಸವರಾಜ, ಎಲ್ಲಾ ಉಪನ್ಯಾಸಕರು ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು. ರಾಷ್ಟ್ರೀಯ ಯುವ ದಿನದ ಮಹತ್ವವನ್ನು ಸಾರುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತಿನ ಜೀವನ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವಲ್ಲಿ ಪ್ರೇರಣೆಯಾಯಿತು.

