ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಎಸ್.ಡಿ.ಎಂ. ಪದವಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಶ್ರೀನಿಕಾ ಎಸ್. ಅಂಬಿಗ ಅವರು ರಾಷ್ಟ್ರೀಯ ಮಟ್ಟದ ಎನ್.ಸಿ.ಸಿ. ತರಬೇತಿ ಶಿಬಿರದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿ ಜಿಲ್ಲೆಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇರಳ ರಾಜ್ಯದ ಎಝಿಮಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ದಿನಾಂಕ ಡಿಸೆಂಬರ್ 15 ರಿಂದ 26ರವರೆಗೆ ಆಯೋಜಿಸಲಾದ ಅಖಿಲ ಭಾರತ ವಾರ್ಷಿಕ ತರಬೇತಿ ಶಿಬಿರದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸುಮಾರು 300 NCC ಕೆಡೆಟ್‌ಗಳು ಭಾಗವಹಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಕೇವಲ 4 NCC ವಿದ್ಯಾರ್ಥಿಗಳಲ್ಲಿ ಕುಮಾರಿ ಶ್ರೀನಿಕಾ ಅಂಬಿಗ ಒಬ್ಬರಾಗಿದ್ದು ವಿಶೇಷ. ಕರ್ನಾಟಕ–ಗೋವಾ ಡೈರೆಕ್ಟರೇಟ್‌ನಿಂದ ಒಟ್ಟು 26 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದ ಮುಖ್ಯ ಉದ್ದೇಶ ವಿವಿಧ ರಾಜ್ಯಗಳ ಸಂಸ್ಕೃತಿಗಳ ವಿನಿಮಯದ ಮೂಲಕ ಪರಸ್ಪರ ಅರಿವು ವೃದ್ಧಿಸುವುದಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಭಕ್ತಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಆಗಿದೆ.
ಈ ಶಿಬಿರದಲ್ಲಿ ಬೋಟ್ ಪುಲ್ಲಿಂಗ್, ಬೋಟ್ ರಿಗ್ಗಿಂಗ್, ಫೈರಿಂಗ್, ಸೆಮಾಫೋರ್, ಡ್ರಿಲ್, ಕಲ್ಚರಲ್ ಸಾಂಗ್ ಮತ್ತು ಡ್ಯಾನ್ಸ್ ಸೇರಿದಂತೆ ಹಲವು ತರಬೇತಿ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆದವು.
ಎನ್.ಸಿ.ಸಿ.ಯು ಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಒಳಗೊಂಡ ಸಂಸ್ಥೆಯಾಗಿದ್ದು, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮೂಲಭೂತ ಸೈನಿಕ ತರಬೇತಿ ಮತ್ತು ಸಾಹಸ ಚಟುವಟಿಕೆಗಳನ್ನು ಒದಗಿಸುತ್ತದೆ.
ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಕೂಡ!
ಹೊನ್ನಾವರ ತಾಲ್ಲೂಕಿನ ಮೊಳ್ಕೋಡ್ ಗ್ರಾಮದ ಶ್ರೀ ಶ್ರೀಧರ್ ಅಂಬಿಗ ಹಾಗೂ ಶ್ರೀಮತಿ ಸುಮಿತ್ರಾ ಅಂಬಿಗ ಇವರ ಪುತ್ರಿಯಾದ ಶ್ರೀನಿಕಾ ಅಂಬಿಗ ಅವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ.
ನವೆಂಬರ್ 11, 2025ರಂದು ಹೊನ್ನಾವರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ 18+ ವಿಭಾಗದಲ್ಲಿ ಕುಮಿತೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರಿಗೆ ಕರಾಟೆ ತರಬೇತುದಾರರಾದ ಪ್ರಭಾಕರ್ ಗೌಡ ತರಬೇತಿ ನೀಡಿದ್ದರು.
ಶ್ರೀನಿಕಾ ಅಂಬಿಗ ಅವರ ಎನ್.ಸಿ.ಸಿ. ಹಾಗೂ ಇತರ ಸಾಧನೆಗಳನ್ನು ಗಮನಿಸಿ, ಅವರಿಗೆ ತರಬೇತಿ ನೀಡಿದ ಲೆಫ್ಟಿನೆಂಟ್ ಸಂತೋಷ್ ಗುಡಿಗಾರ್ (ಅಸೋಸಿಯೇಟ್ ಎನ್.ಸಿ.ಸಿ. ಅಧಿಕಾರಿ), ಕಾಲೇಜಿನ ಪ್ರಾಧ್ಯಾಪಕರಾದ ಡಿ.ಎಲ್. ಹೆಬ್ಬಾರ್, ಪ್ರಾಂಶುಪಾಲರಾದ ಜಿ.ಎನ್. ಭಟ್, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.

