ನಗರದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಿಸಿರುವ ಸ್ಪರ್ಧಾತ್ಮಕ ‌ಪರೀಕ್ಷಾ ತರಬೇತಿ ಕೇಂದ್ರ ‘ಪ್ರಬುದ್ಧ ಅಕಾಡೆಮಿ’ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಉದ್ಘಾಟಿಸಿದರು.
ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಪೊಲೀಸ್ ಮತ್ತು ಇತರ ಸರ್ಕಾರಿ ನೇಮಕಾತಿಗಳಿಗೆ ಅನುಕೂಲ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ ಕೇಂದ್ರವನ್ನು ನಿರ್ಮಿಸಲಾಗಿದೆ.
ನಾಲ್ಕು

1,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದು, ಸದ್ಯಕ್ಕೆ 500 ಅಭ್ಯರ್ಥಿಗಳಿಗೆ ತರಬೇತಿ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಪ್ರವೇಶ ಪರೀಕ್ಷೆ ನಡೆಸಿ, ಅರ್ಹತೆ ಆಧಾರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರದಿಂದ ಯುಪಿಎಸ್‌ಸಿ, ಕೆಪಿಎಸ್‌ಸಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಇದೇ ಮೊದಲು. ತರಬೇತಿ ಕೇಂದ್ರ ಸುಮಾರು 10,449.35 ಚ.ಮೀ ವಿಸ್ತೀರ್ಣ ಹೊಂದಿದೆ. ಸಮಾಜ ಕಲ್ಯಾಣ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಒಟ್ಟು ₹29.52 ಕೋಟಿ ವೆಚ್ಚದಲ್ಲಿ ಅಕಾಡೆಮಿ ನಿರ್ಮಾಣವಾಗಿದೆ.

ಸೌಲಭ್ಯಗಳೇನು?: ಮೂರು ಅಂತಸ್ತು ಇರುವ (ಜಿ+3) ಕಟ್ಟಡದಲ್ಲಿ ನಾಲ್ಕು ಸ್ಮಾರ್ಟ್ ತರಗತಿ ಕೊಠಡಿಗಳು, ಡಿಜಿಟಲ್‌ ಪ್ರಸ್ತುತಿಗೆ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯ ಇರುವ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಡಿಜಿಟಲ್ ಲೈಬ್ರರಿ, ಆನ್‌ಲೈನ್ ಪರೀಕ್ಷೆಗಳಿಗಾಗಿ ಕಂಪ್ಯೂಟರ್ ಲ್ಯಾಬ್, ಅಣಕು ಪರೀಕ್ಷಾ ಸಭಾಂಗಣಗಳು, ಮಾರ್ಗದರ್ಶನ ಮತ್ತು ಸಮಾಲೋಚನಾ ಕೊಠಡಿಗಳು ಇವೆ.

ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ‌ ಕಮಕನೂರ, ಜಗದೇವ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *