ಮೂರು ಟ್ರ್ಯಾಲಿಗಳಲ್ಲಿ ತುಂಬಿ ಹೊತ್ತೊಯ್ಯುತ್ತಿದ್ದ ಕಬ್ಬಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಕಬ್ಬು ಒಣಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಎದೆಗುಂದದ ಚಾಲಕ, ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಾಹುತ ತಪ್ಪಿಸಲು ಬೆಂಕಿ ಹತ್ತಿದ ಟ್ರ್ಯಾಕ್ಟರ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ಗ್ರಾಮದ ರಸ್ತೆಗಳಲ್ಲಿ ಬೆಂಕಿ ಉಂಡೆಯಂತೆ ಸಾಗುತ್ತಿದ್ದ ಟ್ರ್ಯಾಕ್ಟರ್ ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಚಾಲಕ ಸಮಯಪ್ರಜ್ಞೆ ಮೆರೆದು ನೇರವಾಗಿ ಸಮೀಪದ ‘ವಾಟರ್ ಸರ್ವಿಸ್ ಸೆಂಟರ್’ಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಹೈ-ಪ್ರೆಶರ್ ಪಂಪ್‌ಗಳ ಮೂಲಕ ನೀರಿನ ಸಿಂಪಡಣೆ ಮಾಡಿ ಬೆಂಕಿ ನಂದಿಸುವ ಪ್ರಾಥಮಿಕ ಪ್ರಯತ್ನ ಮಾಡಲಾಯಿತು.

ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಕ್ಷಣಾರ್ಧದಲ್ಲಿ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಕಾಲಿಕ ಸ್ಪಂದನೆಯಿಂದಾಗಿ ಕಬ್ಬು ಸುಟ್ಟು ಹೋಗಿದ್ದರೂ, ಟ್ರ್ಯಾಕ್ಟರ್ ಇಂಜಿನ್ ಹಾಗೂ ಹೆಚ್ಚಿನ ಆಸ್ತಿಪಾಸ್ತಿ ಹಾನಿಯಾಗುವುದು ತಪ್ಪಿದೆ.

Leave a Reply

Your email address will not be published. Required fields are marked *