ರಾಯಚೂರು ಜನವರಿ 09 (ಕರ್ನಾಟಕ ವಾರ್ತೆ): ನಗರದ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26ರಂದು ಜರುಗುವ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜನವರಿ 09ರ ಶುಕ್ರವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ಎಲ್ಲಾ ಅಧಿಕಾರಿಗಳು ಎಚ್ಚರವಹಿಸಬೇಕು. ಗಣರಾಜ್ಯೋತ್ಸವ ಕಾರ್ಯಕ್ರಮದ ಕುರಿತು ಆಹ್ವಾನ ಪತ್ರಿಕೆಗಳನ್ನು ಶಿಷ್ಟಾಚಾರದಂತೆ ಮುದ್ರಿಸಿ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ತಲುಪಿಸಬೇಕು. ಕಾರ್ಯಕ್ರಮದಲ್ಲಿ ಪೊಲೀಸ್, ಗೃಹ ರಕ್ಷಕ, ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ಏರ್ಪಡಿಸುವಂತೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸುವ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿ ರಚಿಸಲಾಗಿದ್ದು, ಎಲ್ಲಾ ಸಮಿತಿಯ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಸಮನ್ವಯದಿಂದ ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಾಲಂಕಾರ ಮಾಡುವಂತೆ ಮತ್ತು ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಿದರು.
ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ರಾಷ್ಟç ಧ್ವಜಾರೋಹಣ ನೆರವೇರಿಸಲಿದ್ದು, ಆಕರ್ಷಕ ಪಥಸಂಚಲನ ನಡೆಯಲಿದೆ. ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಸಂಜೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದರು.
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ: ಗಣರಾಜ್ಯೋತ್ಸವ ಅಂಗವಾಗಿ ಜ.26ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಅಲ್ಲದೆ ಜಿಲ್ಲಾ ಕ್ರಿಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮಕ್ಕಾಗಿ ಶಾಮಿಯಾನ, ಮೈಕ್ ಸೆಟ್, ಆಸನ ವ್ಯವಸ್ಥೆ, ಪ್ಲೆಕ್ಸ್ ಬ್ಯಾನರ್ ವ್ಯವಸ್ಥೆ ಮಾಡಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹೂವಿನ ಪಾಟ್‌ನೊಂದಿಗೆ ಅಲಂಕರಿಸಬೇಕು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ರಂಗೋಲಿ, ಪತ್ರಿಕಾಗೋಷ್ಠಿಗೆ ಸ್ಥಳವಕಾಶ ಹಾಗೂ ಇನ್ನೀತರ ವ್ಯವಸ್ಥೆ ಮಾಡಬೇಕು ಎಂದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ಫರೇಡ್ ಪೂರ್ವಭಾವಿ ತಯಾರಿಗೆ ಆಗಮಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪೊಲೀಸ್ ಮತ್ತು ಇತರೆ ಸಿಬ್ಬಂದಿಗೆ ಉಪಹಾರ ಹಾಗೂ ಚಹಾದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಡಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮಹೇಂದ್ರ ಕುಮಾರ್, ರಾಯಚೂರು ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ್ ರಾಜಶೇಖರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಹಮದ್ ಅಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿರೇಶ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ ಕಾಂಬಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಭಾರತ ಸೇವಾ ದಳದ ವಿದ್ಯಾ ಸಾಗರ್ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವೇಣುಮಾಧವ್, ಮಲ್ಲೇಶ ಇದ್ದರು.

Leave a Reply

Your email address will not be published. Required fields are marked *