ಕೊಪ್ಪಳ:
ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆಸಿದರು. ಈ ಸಂಭ್ರಮದ ಭಾಗವಾಗಿ ಜವಾರಿ ಕೋಳಿ ಬಾಡೂಟ ಆಯೋಜಿಸಿ, ಗ್ರಾಮಸ್ಥರೊಂದಿಗೆ ಸಂತೋಷ ಹಂಚಿಕೊಂಡರು.
ಹಾಲವರ್ತಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ಕಿನ್ನಾಳ ಮಾತನಾಡಿ, “ಸಿದ್ದರಾಮಯ್ಯ ಅವರು ಈ ದಾಖಲೆಯನ್ನು ಸಾಧಿಸಿರುವುದು ನಮ್ಮೆಲ್ಲರಿಗೂ ಅಪಾರ ಸಂತಸ ತಂದಿದೆ. ಅವರು ರಾಜ್ಯ ಕಂಡ ಧೀಮಂತ ಮತ್ತು ಜನಪರ ನಾಯಕರು. ಬಡವರು, ರೈತರು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸದಾ ಶ್ರಮಿಸಿದ ನಾಯಕ ಸಿದ್ದರಾಮಯ್ಯ. ಉಳಿದ ಅವಧಿಗೂ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿ ಎಂಬುದು ನಮ್ಮ ಆಶಯ” ಎಂದು ಹೇಳಿದರು.
ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಘೋಷಣೆಗಳನ್ನು ಕೂಗಿದರು. ಪರಸ್ಪರ ಸಿಹಿ ಹಂಚಿಕೊಂಡು, ಬಾಡೂಟದ ಮೂಲಕ ಸಂಭ್ರಮಾಚರಣೆ ನಡೆಸಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಮುಖಂಡರಾದ ಭರಮಪ್ಪ ಗೊರವರ, ಮುದಿಯಪ್ಪ ಆದೋನಿ, ಬಾಳಪ್ಪ ಕುರಗಡ್ಡಿ, ಸಿಂದೊಗೆಪ್ಪ ಹೊಸಳ್ಳಿ, ಮುತ್ತು ಹಾಲವರ್ತಿ, ಕೇಮಪ್ಪ ಇಟಗಿ, ಕುಷ್ಟಗಿ ಹನಮಂತ, ಶೇಖರಪ್ಪ ನಾಯಕ್, ಗಿಡ್ಡಪ್ಪ ಸಿರಗೇರಿ, ದೇವಪ್ಪ ಗೋರ್, ಹಾಲಪ್ಪ ಮಲ್ಲಕ್ಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಭಿಮಾನಿಗಳು ಮಾತನಾಡಿ, “ಸಿದ್ದರಾಮಯ್ಯ ಅವರ ಆಡಳಿತ ಶೈಲಿ ಹಾಗೂ ಸಾಮಾಜಿಕ ನ್ಯಾಯಕ್ಕೆ ನೀಡಿರುವ ಒತ್ತು ರಾಜ್ಯದ ಇತಿಹಾಸದಲ್ಲಿ ಮಾದರಿಯಾಗಿದೆ. ಇಂತಹ ನಾಯಕನ ಸಾಧನೆ ನಮಗೆ ಹೆಮ್ಮೆ ತಂದಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *