ಕೊಪ್ಪಳ : ಇಲ್ಲಿನ ಗವಿಮಠಕ್ಕೆ ಬರುವ ಎಲ್ಲ ದಿಕ್ಕುಗಳಿಂದಲೂ ಸೋಮವಾರ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.
ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭವಾಗಿ ನಾಲ್ಕು ದಿನಗಳ ಕಳೆದರೂ ವಿಶೇಷ ಆದ್ಯತೆ ಇರುವುದು ಮಹಾರಥೋತ್ಸವದ ದಿನಕ್ಕೆ.
ಆದ್ದರಿಂದ ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರ ಕಂಡುಬಂದಿತು. ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಸಿ.ಎಚ್‌. ವಿಜಯಶಂಕರ್‌ ಅವರು ಧ್ಜಜ ಹಾರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಆಗ ಭಕ್ತರಲ್ಲಿ ಧನ್ಯತೆಯ ಭಾವ ಕಂಡಿತು. ತಮ್ಮೂರಿನ ಸಾಧಕರಿಗೆ ಗವಿಮಠದ ಮಹಾರಥೋತ್ಸವ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದಕ್ಕೆ ಜನರಲ್ಲಿ ಸಂಭ್ರಮ ಇಮ್ಮಡಿಗೊಂಡಿತ್ತು.

ಮಹಾರಥೋತ್ಸವ ನಡೆದಾಗ ಲಕ್ಷಾಂತರ ಜನ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು. ಗವಿಮಠದ ವಿಶಾಲವಾದ ಆವರಣದಿಂದ ಆರಂಭವಾದ ಮಹಾರಥೋತ್ಸವದ ಯಾತ್ರೆ ಸುರಕ್ಷಿತವಾಗಿ ಪಾದಗಟ್ಟೆ ಮುಟ್ಟಿ ವಾಪಸ್‌ ಸ್ವ ಸ್ಥಾನಕ್ಕೆ ಬರುತ್ತಿದ್ದಂತೆ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿಯಾದ ಗವಿಮಠದ ಜಾತ್ರೆಗೆ ಎಷ್ಟೇ ಲಕ್ಷಾಂತರ ಜನ ಬಂದರೂ ಯಾವುದೇ ಅವಘಡಕ್ಕೆ ಅವಕಾಶವಿಲ್ಲದಂತೆ ಸರಾಗವಾಗಿ, ಸಂಭ್ರಮದಿಂದ ತೇರು ಎಳೆಯಲಾಗುತ್ತದೆ ಎನ್ನುವುದು ವಿಶೇಷ. ಈ ಕಾರ್ಯದಲ್ಲಿ ಎನ್‌ಸಿಸಿ, ಸ್ಕೌಟ್‌ ಅಂಡ್‌ ಗೈಡ್ಸ್‌, ಎನ್‌ಎಸ್‌ಎಸ್‌, ವಿದ್ಯಾರ್ಥಿಗಳ ತಂಡ ಹೀಗೆ ಪ್ರತಿ ಸ್ವಯಂಸೇವಕರು ಜನ ಶಿಸ್ತು ಕಾಪಾಡುವಲ್ಲಿ, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಪ್ರಮುಖ ಪಾತ್ರ ವಹಿಸಿದರು.

ಮಹಾರಥೋತ್ಸವದ ದಿನ ಜನ ಜಿಲ್ಲೆ ಹಾಗೂ ಜಿಲ್ಲೆಯ ಗಡಿ ಭಾಗದ ವಿವಿಧ ಹಳ್ಳಿಗಳಿಂದ ಸೂರ್ಯೋದಕ್ಕೂ ಮೊದಲು ಪಾದಯಾತ್ರೆ ಮೂಲಕ ಬಂದರೆ, ಇನ್ನೂ ಕೆಲವರು ವಾಹನಗಳ ಮೂಲಕ್ಕೆ ಗವಿಮಠಕ್ಕೆ ಬಂದಿದ್ದರು. ಮಹಾರಥೋತ್ಸವದ ಹಿಂದಿನ ದಿನದಿಂದಲೇ ಬೃಹತ್‌ ತೇರು ಕಟ್ಟುವ ಕಾರ್ಯ ಮಾಡಲಾಯಿತು.

ಲಕ್ಷಾಂತರ ಭಕ್ತರು ಬಂದರೂ ಎಲ್ಲೆಡೆಯೂ ಸ್ವಚ್ಛತೆ ನಿರ್ವಹಣೆ ಮಾಡುವುದು ಗವಿಮಠದ ಜಾತ್ರೆಯ ವಿಶೇಷ. ಎಲ್ಲೇ ಕಸಬಿದ್ದಿರುವುದು ಅಥವಾ ವಾತಾವರಣ ಹೊಲಸು ಮಾಡಿರುವುದು ಕಂಡುಬಂದರೆ ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಸ್ವಚ್ಛಗೊಳಿಸುತ್ತಾರೆ. ಹೀಗಾಗಿ ಜನ ಸ್ವಯಂಪ್ರೇರಿತರಾಗಿ ಸ್ವಚ್ಚತೆಗೆ ಒತ್ತು ಕೊಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಚಳಿಯ ವಾತಾವರಣವಿದ್ದು ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬಂದ ಭಕ್ತರಿಗೆ ಮಠದ ವತಿಯಿಂದಲೇ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಕೇಂದ್ರದಲ್ಲಿರುವ ವಿವಿಧ ಕಲ್ಯಾಣ ಮಂಟಪಗಳು, ಶಾಲಾ ಕಾಲೇಜುಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು.

ಜಾತ್ರೆಯಲ್ಲಿ ಅಚ್ಚುಕಟ್ಟುತನ, ಸ್ವಚ್ಛತೆ, ಜನರ ಪಾಲ್ಗೊಳ್ಳುವಿಕೆ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯ ಮಾನವೀಯ ಹಾಗೂ ಸಾಮಾಜಿಕ ಕಾರ್ಯಗಳು, ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಹಾಗೂ ಅಧ್ಯಾತ್ಮದ ಪ್ರೀತಿ ಹಂಚುವಿಕೆಯಿಂದಾಗಿ ಗವಿಮಠದ ಕಾರ್ಯವೈಖರಿ ಎಲ್ಲರ ಮೆಚ್ಚುಗೆ ಗಳಿಸಿದೆ. ಹೀಗಾಗಿ ಕೊಪ್ಪಳ ಎಂದರೆ ಗವಿಮಠ ಎನ್ನುವ ಬ್ರ್ಯಾಂಡ್‌ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *