ತಾಳಿಕೋಟಿ: ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರ ಬದುಕಿಗೆ ಅಗತ್ಯವಾಗಿರುವ ಉತ್ತಮ ಸಂಸ್ಕಾರಗಳನ್ನೂ ಕೊಡಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ)ಹೇಳಿದರು. ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಕುರಿತು ಕೀಳುರಿಮೆ ಬೇಡ,ಅವು ಖಾಸಗಿ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುವಷ್ಟು ಇಂದು ಸಶಕ್ತವಾಗಿವೆ, ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಸರ್ಕಾರಿ ಶಾಲೆಗಳ ಕುರಿತು ಎಲ್ಲರಲ್ಲೂ ಅಭಿಮಾನವಿರಲಿ. ಶಿಕ್ಷಣ ಸಚಿವರು ನನ್ನ ಕ್ಷೇತ್ರಕ್ಕೆ ನಾಲ್ಕು ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ನನಗೆ ಸನ್ಮಾನಿಸುವ ಕಾರ್ಯಕ್ರಮ ಬಿಡಬೇಕು ಏಕೆಂದರೆ ಇದು ಶಿಕ್ಷಕರಿಗೆ ಹೊರೆಯಾಗುತ್ತದೆ ಎಂದರು. ಜೆಡಿಎಸ್ ತಾಲೂಕಾಧ್ಯಕ್ಷ ಮಡುಸೌಕಾರ ಬಿರಾದಾರ ಮಾತನಾಡಿ ನಮ್ಮೂರಿಗೆ ಪ್ರೌಢಶಾಲೆ ಇಲ್ಲದೆ ಇರುವುದರಿಂದ ಇಲ್ಲಿಯ ಮಕ್ಕಳು ದೂರದ ಪಟ್ಟಣಕ್ಕೆ ಹೋಗಬೇಕಾಗಿತ್ತು ಇದರ ಅನುಕೂಲ ಮಾಡಿಕೊಟ್ಟ ಶಾಸಕ ರಾಜುಗೌಡರಿಗೆ ಅಭಿನಂದಿಸುತ್ತೇನೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸಬೇಕು, ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದು ಖಾಸಗಿ ಶಾಲೆಗಳಿಗೆ ಹೋಗಲು ಅವಕಾಶ ಮಾಡಿಕೊಡಬಾರದು ಎಂದರು. ಬಿಇ ಓ ಬಿ.ಎಸ್.ಸಾವಳಗಿ,ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡ ಜೈ ಭೀಮ್ ಮುತ್ತಗಿ ಹಾಗೂ ಗುರುಬಸಪ್ಪ ಕಂಗಳ ಮಾತನಾಡಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಹಾಗೂ ಶಾಲೆ ಉನ್ನತಿಕರಿಸಲು ಶ್ರಮಿಸಿದ ಮುಖ್ಯ ಶಿಕ್ಷಕ ಟಿ.ಎಸ್.ಲಮಾಣಿ ಅವರಿಗೆ ಶಾಸಕರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಅಶೋಕಗೌಡ ಪಾಟೀಲ, ಉಪಾಧ್ಯಕ್ಷ ವೀರೇಶಗೌಡ ಪಾಟೀಲ(ಕಾರಗನೂರ), ಎಸ್ ಡಿ ಎಮ್ ಸಿ ಅಧ್ಯಕ್ಷ ಬೀರಪ್ಪ ಪೂಜಾರಿ,ಇಸಿಓ ಸುರೇಶ ಹಿರೇಮಠ,ಬಿ.ಆರ್.ಸಿ.ಆರ್.ಬಿ.ದಮ್ಮೂರಮಠ,ಬಿ.ಆರ್.ಪಿ.ಕಾಶಿನಾಥ ಸಜ್ಜನ, ಸಿ.ಆರ್.ಸಿ.ಎಸ್.ಎಂ.ಪಾಲ್ಕಿ,ಮು.ಗು.ಟಿ.ಎಸ್.ಲಮಾಣಿ,ಮುಖಂಡರಾದ ಸಾಹೇಬಗೌಡ ಬಿರಾದಾರ(ಲಕ್ಕುಂಡಿ), ಗ್ರಾಪಂ ಸದಸ್ಯ ಭೀಮನಗೌಡ ತಂಗಡಗಿ, ನಿಂಗನಗೌಡ ಪಾಟೀಲ,ಗ್ರಾಪಂ ಮಾಜಿ ಅಧ್ಯಕ್ಷೆ ಅಶ್ವಿನಿ ಸಾ.ಬಿರಾದಾರ,ಕೆ.ಪಿ.ಎಸ್.ಟಿ. ಅಧ್ಯಕ್ಷ ಎಸ್ ಎಸ್ ತೀರ್ಥ, ಹುಸೇನ ಮುಲ್ಲಾ, ಯೋಗೇಶ ಚೌದ್ರಿ,ಮು.ಶಿ.ಜಿ.ಕೆ.ಮಣೂರ,ಮು.ಗು.ಬಿ.ಸಿ.ಗೋಗಿ, ಸಂಘಟನಾ ಕಾರ್ಯದರ್ಶಿ ಅಂಬಿಕಾ ಎನ್, ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *