ತಾಳಿಕೋಟಿ. ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಹಿಂದೂ ಜನಜಾಗೃತ ವೇದಿಕೆ ವತಿಯಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಹಿಂಸೆ ಹಾಗೂ ಕೊಲೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಶುಕ್ರವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಶ್ರೀ ಅಂಬಾಭವಾನಿ ದೇವಸ್ಥಾನ ರಸ್ತೆ ಕತ್ರಿ ಬಜಾರ್ ಶಿವಾಜಿ ಸರ್ಕಲ್ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಬಸ್ ನಿಲ್ದಾಣದ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಕೆಲವು ಹೊತ್ತು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಹಿಂದೂ ಜನಜಾಗೃತ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರು ಪಾಲ್ಗೊಂಡು ಕೈಯಲ್ಲಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿ ಹಿಂಸಾಚಾರವೆಸಗಿದ ದುಷ್ಕರ್ಮಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪ ಚಂದ್ರಹಾಸ್ ನ ಬರ್ಬರ ಕೊಲೆ ಅತ್ಯಂತ ಅಮಾನವೀಯ ಕೃತ್ಯವಾಗಿದ್ದು ಇಡೀ ಮಾನವ ಸಮಾಜ ತಲೆತಗ್ಗಿಸುವಂತದ್ದಾಗಿದೆ, ಹಿಂದೂಗಳು ಸಹಿಷ್ಣುಗಳು, ದೇಶದಲ್ಲಿರುವ ಎಲ್ಲರೊಂದಿಗೆ ಪ್ರೀತಿ ಭಾತೃತ್ವದಿಂದ ಬಾಳುತ್ತಿದ್ದಾರೆ ಎಲ್ಲರಿಗೂ ಆಶ್ರಯ ಕೊಟ್ಟ ದೇಶ ನಮ್ಮದಾಗಿದೆ ಆದರೆ ಈ ರೀತಿಯ ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ ಇದು ಹಿಂದೂ ಸಮಾಜದ ಒಗ್ಗಟ್ಟಿನ ಕೊರತೆಯಿಂದ ನಡೆಯುತ್ತಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ಜಾತಿ ಮತ ಭೇದ ಮರೆತು ಇಂದು ನಾವೆಲ್ಲರೂ ಒಂದಾಗುವ ಅಗತ್ಯವಿದೆ. ಸರ್ಕಾರ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಜೀವ ಮತ್ತು ಆಸ್ತಿಗೆ ಸಂಪೂರ್ಣ ಭದ್ರತೆ ಒದಗಿಸಲು ಅಲ್ಲಿಯ ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕೆಂದು ಆಗ್ರಹಿಸಿದರು. ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹಾಗೂ ಶರಣ ಸೋಮನಾಳದ ಶಿವಪುತ್ರ ಮಹಾಸ್ವಾಮಿಗಳು ಹಿಂಸಾಚಾರದ ಘಟನೆಯನ್ನು ಖಂಡಿಸಿ ಮಾತನಾಡಿ ಹಿಂದೂ ಸನಾತನ ಧರ್ಮ ಎಂದೂ ಅಳಿಯದಂತಹ ಧರ್ಮವಾಗಿದೆ ನಾವು ನಮ್ಮ ನಡುವೆ ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಧರ್ಮ ರಕ್ಷಣೆಗೆ ಒಂದಾಗಿ ಹೋರಾಡುವ ಅಗತ್ಯವಿದೆ ಎಂದರು. ಪ್ರತಿಭಟನಾ ಮೆರವಣಿಗೆ ಸಾನಿಧ್ಯವನ್ನು ಸಾಸನೂರದ ಮಹಾಂತಲಿಂಗ ಶಿವಾಚಾರ್ಯ ಹಾಗೂ ಬಂಟನೂರದ ಅಮ್ಮನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಮುಖಂಡರಾದ ಡಾ.ವಿ.ಎಸ್.ಕಾರ್ಚಿ, ಮಂಜುನಾಥ ಶೆಟ್ಟಿ, ಪ್ರಕಾಶ್ ಹಜೇರಿ, ಮಾನಸಿಂಗ್ ಕೊಕಟನೂರ, ಮುದುಕಪ್ಪ ಬಡಿಗೇರ, ಅಮೀತಸಿಂಗ್ ಮನಗೂಳಿ, ಗಂಗಾಧರ ಕಸ್ತೂರಿ,ಕೆ.ಎಸ್.ಮುರಾಳ, ಕಾಶಿನಾಥ ಸಜ್ಜನ, ಹರಿಸಿಂಗ್ ಮೂಲಿಮನಿ, ಪರಶುರಾಮ್ ತಂಗಡಗಿ,
ಸುರೇಶ ಹಜೇರಿ,ರಾಜು ಹಂಚಾಟೆ, ರಾಘು ಮಾನೆ, ರಾಘು ವಿಜಾಪುರ, ರಾಮು ಜಗತಾಪ, ಪ್ರಭು ಬಿಳೆಭಾವಿ,ನದೀಮ ಕಡು, ದ್ಯಾಮನಗೌಡ ಪಾಟೀಲ, ನಿಂಗನಗೌಡ ಬಿರಾದಾರ, ಜಗದೀಶ ಬಿಳೇಭಾವಿ, ರಾಜು ಅಲ್ಲಾಪೂರ, ಅಶೋಕ ಚಿನಗುಡಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಇದ್ದರು. ಪೋಲಿಸ್ ಬಂದೋಬಸ್ತ್: ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಂತೆ ನೋಡಿಕೊಳ್ಳಲು ಪಿಎಸ್ಐ ಜ್ಯೋತಿ ಖೋತ್ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

