ತಾಳಿಕೋಟಿ: ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ಸರ್ವಾಂಗೀಣ ಪ್ರಗತಿಗಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸಾಕಷ್ಟು ಯೋಜನೆಗಳನ್ನು ತಂದಿದೆ ಇದನ್ನು ಪ್ರಭಾವಪೂರ್ಣವಾಗಿ ಅನುಷ್ಠಾನಗೊಳಿಸಲು ಶಿಕ್ಷಕರು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಹೇಳಿದರು. ಪಟ್ಟಣದ ಆಶ್ರಯ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಜಿಪಂ ವಿಜಯಪುರ, ತಾಪಂ ತಾಳಿಕೋಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಸಮೂಹ ಸಂಪನ್ಮೂಲ ಕೇಂದ್ರ ತಾಳಿಕೋಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕ್ಲಸ್ಟರ್ ಮಟ್ಟದ 2025- 26ನೇ ಸಾಲಿನ ಎಫ್ ಎಲ್ ಏನ್ ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಆಸಕ್ತಿಯನ್ನು ಸೃಷ್ಟಿಸಿ ಅವರಿಗೆ ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನವನ್ನು ನೀಡಲು ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿದೆ ಮಕ್ಕಳು ಇದರಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದರು. ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಡಾ.ಎಂ.ಎಂ.ಬೆಳಗಲ್ ಮಾತನಾಡಿ ಕಳೆದ 2 ವರ್ಷಗಳಿಂದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಇದರ ಮೂಲಕ ಎಫ್ ಎಲ್ ಏನ್ ಆಧಾರಿತ ಚಟುವಟಿಕೆಗಳನ್ನು ಮಕ್ಕಳಲ್ಲಿ ಬೆಳಸಲು ಇಲಾಖೆ ಪ್ರಯತ್ನಿಸುತ್ತಿದೆ, ಇದು ಮಕ್ಕಳನ್ನು ಸಂತಸದಾಯಕವಾದ ಕ್ರಿಯಾಶೀಲತೆ ಎಡೆಗೆ ತೆಗೆದುಕೊಂಡು ಹೋಗುವ ಕಾರ್ಯಕ್ರಮವಾಗಿದೆ ಎಂದರು. ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈ ಭೀಮ ಮುತ್ತಗಿ ಮಾತನಾಡಿ ಇವತ್ತು ಶಿಕ್ಷಣ ಆರೋಗ್ಯ ದಂತಹ ಮಹತ್ವದ ಸೇವಾ ಕ್ಷೇತ್ರಗಳು ಬಂಡವಾಳ ಷಾಹಿಗಳ ಸ್ವತ್ತಾಗುತ್ತಿರುವುದು ನೋವಿನ ಸಂಗತಿ, ಶಿಕ್ಷಣ ಮತ್ತು ಆರೋಗ್ಯ ಸಮಾಜದ ಖಡು ಬಡವರಿಗೆ ಸರಳವಾಗಿ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಾಗಿದೆ ನಮ್ಮ ಸಂಘಟನೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಇಲಾಖೆಯೊಂದಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಸದಾ ಸಿದ್ಧವಾಗಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಿ.ಟಿ. ವಜ್ಜಲ್, ಕ್ಷೇತ್ರ ಸಮನ್ವಯಾಧಿಕಾರಿ ಆರ್. ಬಿ.ದಮ್ಮೂರಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಜನ್ಮ ದಿನಾಚರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಎಸ್ ಎಸ್ ಹಿರೇಮಠ, ಎಸ್ ಡಿ ಎಂ ಸಿ ಅಧ್ಯಕ್ಷ ದಸ್ತಗೀರ ಬಿ.ಆರ್.ಪಿ.ಕಾಶಿನಾಥ ಸಜ್ಜನ, ಮುಖ್ಯ ಗುರುಗಳಾದ ಎಂ.ಬಿ.ನಾಗೂರ, ಗುರುಮಾತೆ ಎಸ್ಎಸ್ ಹುನುಗುಂದ, ಬಿ.ಆರ್.ಸಿ.ರಾಜು ವಿಜಾಪುರ, ಬಾಲಾಜಿ ಸಿಂಗ್ ವಿಜಾಪುರ, ಶಿಕ್ಷಕಿ ಎಸ್.ಬಿ.ಹೂಗಾರ, ಎಸ್‌ಡಿಎಂಸಿ ಸದಸ್ಯ ರಫೀಕ ಚೋರಗಸ್ತಿ, ಅಲ್ತಾಫ್ ವಿಜಾಪುರ ಅಬೂಬಕರ್ ಲಾಹೋರಿ, ಶಿಕ್ಷಕ ಡಿ.ಜೆ.ಬಾಗೆವಾಡಿ,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಆರ್ ಎಂ ಕುಲಕರ್ಣಿ ಪ್ರಾರ್ಥಿಸಿದರು. ಸಿ ಆರ್ ಸಿ ರಾಜು ವಿಜಾಪುರ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಎಂ ಬಿ ಮೈಲೇಶ್ವರ ನಿರೂಪಿಸಿ ವಂದಿಸಿದರು.

