ಬೆಂಗಳೂರು: ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್-1) ಯೋಜನೆಗಾಗಿ ಭೂಮಾಲಿಕರಿಂದ ಸಮ್ಮತಿ ಪತ್ರಗಳು ಸ್ವೀಕೃತವಾಗುತ್ತಿದ್ದಂತೆ, ಭೂಸ್ವಾಧೀನ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಆರಂಭವಾಗಿದೆ.
ಸಂಧಾನಿತ ಮೊತ್ತ ಆಯ್ಕೆ ಮಾಡಿಕೊಳ್ಳುವವರಿಗೆ ಪ್ರತಿ ಎಕರೆಗೆ ನೀಡಲಾಗುವ ಪರಿಹಾರ ಮೊತ್ತದ ವಿವರಗಳನ್ನು ಹಾಗೂ ಟಿಡಿಆರ್ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ವಿವರಗಳನ್ನೂ ಒಳಗೊಂಡಂತೆ ನಮ್ಮ ಅಧಿಕೃತ ವೆಬ್‌ಸೈಟ್ http:/engaluruBusinessCorridor.com ನಲ್ಲಿ ಗ್ರಾಮವಾರು ಪ್ರಕಟಿಸಲಾಗಿದೆ.
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್-1) ಯೋಜನೆಗಾಗಿ ಪ್ರಸ್ತುತ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನು ಹೆಚ್ಚಾಗಿ ಕೃಷಿ ಭೂಮಿಯಾಗಿದ್ದರೂ ಸಹ, ಟಿಡಿಆರ್ ಅನ್ನು ನಗರ ಭೂ ಪರಿವರ್ತಿತ ಮೌಲ್ಯದ ಆಧಾರದ ಮೇಲೆ (ಪ್ರತಿ ಚದರ ಅಡಿ ಲೆಕ್ಕಾಚಾರದಲ್ಲಿ) ನೀಡಲಾಗುತ್ತಿದೆ. ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ ಜಮೀನನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವಸತಿ ನಿವೇಶನದ ಅಳತೆಯು ಕೇವಲ 60:40 ಅನುಪಾತಕ್ಕೆ ಸೀಮಿತವಾಗಿರುವುದಿಲ್ಲ. ಇದು ಭೂಮಿಯ ಮಾರ್ಗದರ್ಶಿ ಮೌಲ್ಯವನ್ನು(ಗೈಡೆನ್ಸ್ ವ್ಯಾಲ್ಯೂ) ಅವಲಂಬಿಸಿರುತ್ತದೆ. ಎಲ್ಲಿ ಮಾರ್ಗದರ್ಶಿ ಮೌಲ್ಯ ಹೆಚ್ಚಿದೆಯೋ, ಅಲ್ಲಿ ಭೂಮಾಲಿಕರು ಶೇ. 40 ಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿವೇಶನಗಳನ್ನು ಪಡೆಯಲು ಅವಕಾಶವಿರುತ್ತದೆ.
ನಾಲ್ವರು ಜಿಲ್ಲಾಧಿಕಾರಿಗಳ ನೇಮಕ
ಸಂಧಾನಿತ ಮೊತ್ತದ ಶೀಘ್ರ ಅನುಮೋದನೆಗಾಗಿ ಬಿಡಿಎ ಆಯುಕ್ತ ಮಣಿವಣ್ಣನ್ ಅವರು ನಾಲ್ವರು ಜಿಲ್ಲಾಧಿಕಾರಿಗಳನ್ನು(ಭೂಸ್ವಾಧೀನ) ನೇಮಿಸಿದ್ದಾರೆ. ಐದರಲ್ಲಿ ಒಂದು ರೀತಿಯ ಪರಿಹಾರದ ಆಯ್ಕೆಗಾಗಿ ಭೂಮಾಲಿಕರು @BDAOffi cialGok ಅಥವಾ @Bc_Bengaluru ಸಂಪರ್ಕಿಸಲು ಕೋರಲಾಗಿದೆ.
ನೀವು ದಾಖಲೆಗಳನ್ನು ಸಲ್ಲಿಸಿದ 15 ದಿನಗಳ ಒಳಗಾಗಿ ನಗದು ಪರಿಹಾರದ ಇತ್ಯರ್ಥ ಅಥವಾ ತಾತ್ಕಾಲಿಕ ಟಿಡಿಆರ್ ಅರ್ಹತಾ ಪ್ರಮಾಣಪತ್ರ ಅಥವಾ ವಾಣಿಜ್ಯ/ವಸತಿ ಭೂಮಿಯ ಅರ್ಹತಪತ್ರವನ್ನು ನೀಡಲಾಗುವುದು ಎಂದು ಬಿಡಿಎ ಮೂಲಗಳು ತಿಳಿಸಿದೆ.
ಪರಿಹಾರ ವಿವರ ತಿಳಿದುಕೊಳ್ಳುವುದು ಹೇಗೆ?
ಪಿಆರ್‌ಆರ್ ಹಂತ-1ಕ್ಕಾಗಿ ಭೂಸ್ವಾಧೀನಗೊಳ್ಳುತ್ತಿರುವ ಗ್ರಾಮಗಳ ಭೂಮಾಲಿಕರಿಗೆ ನೀಡಲಾಗುವ ಪರಿಹಾರದ ಸಂಪೂರ್ಣ ವಿವರಗಳನ್ನು http:/engaluruBusinessCorridor.com ಮೂಲಕ ಪಡೆಯಬಹುದು. ಹಳೆಯ ಪರಿಹಾರದ ದರಗಳ ಜೊತೆಗೆ, ನೂತನ ಪರಿಹಾರದ ಆಯ್ಕೆಗಳಿಗೆ ಸಂಬಂಧಿಸಿದ ವಿವರಗಳನ್ನೂ ಸಹ ಒದಗಿಸಲಾಗಿದೆ. ಹೋಬಳಿವಾರು ಗ್ರಾಮಗಳಿಗೆ ನಿಗದಿಪಡಿಸಿರುವ ಪರಿಹಾರವನ್ನು ಸುಲಭವಾಗಿ ಇಲ್ಲಿ ಪರಿಶೀಲಿಸಬಹುದು. ವದಂತಿಗೆ ಕಿವಿಗೊಡಬೇಡಿ: ರಮಾರಿಂಗ್ ರೋಡ್ ಯೋಜನೆಗೆ ಭೂಮಿ ಕೊಡುವ ಮಾಲಿಕರು ಮತ್ತು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ವೆಬ್‌ಸೈಟ್ ಮೂಲಕವೇ ಅಥವಾ ಸಂಬಂಧಿತ ಅಧಿಕಾರಿಗಳಿಂದಲೇ ನಿಖರವಾದ ಮಾಹಿತಿ ಪಡೆದುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ವಸತಿ, ವಾಣಿಜ್ಯ ಭೂಮಿಗೆ ಪರಿಹಾರ ದರ ನಿಗದಿ
ಸ್ವಾಧೀನಪಡಿಸಿಕೊಂಡ ಭೂಮಿಗೆ ಪ್ರತಿ ಎಕರೆಗೆ 2.50 ಕೋಟಿ ರೂ.ನಿಂದ 15.60 ಕೋಟಿ ರೂ. ವರೆಗೆ ಪರಿಹಾರ ನಿಗದಿಪಡಿಸಲಾಗಿದೆ. ವಾಣಿಜ್ಯ ಫ್ಲ್ಯಾಟ್‌ಗಳಿಗೆ, ಪ್ರತಿ ಚದರ ಅಡಿಗೆ ಸರಿಸುಮಾರು 8,385 ರೂ. ದರ ನಿಗದಿ ಪಡಿಸಲಾಗಿದೆ. ಸಕ್ಷಮ ಮತ್ತು ಸ್ಥಳೀಯ ಅಧಿ ಕಾರಿಗಳು ವಸತಿ ಫ್ಲ್ಯಾಟ್‌ಗಳಿಗೆ ನಿಗದಿಪಡಿಸಿದ ದರಗಳಿಗೆ ಅನುಗುಣವಾಗಿ, ಅಧಿಸೂಚಿತ ಭೂಮಿಯ ಮಾರ್ಗದರ್ಶನ ಮೌಲ್ಯವನ್ನು ಆಧರಿಸಿ ಪರಿಹಾರ ನಿರ್ಧರಿಸಲಾಗುತ್ತದೆ.

